ಬಂಗಾರಪೇಟೆ ಗ್ರಾಮಾಂತರ : ಗ್ರಾಮ ಪಂಚಾಯಿತಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಸ್ವಪಕ್ಷದ ಸದಸ್ಯರೇ ಸಾಮಾನ್ಯ ಸಭೆ ಬಹಿಷ್ಕರಿಸಿದರು.
ಬಂಗಾರಪೇಟೆ ತಾಲೂಕು ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿತ್ತು.
ಸಭೆ ಆರಂಭದಲ್ಲೇ ಸ್ವಪಕ್ಷದ ಸದಸ್ಯರಿಂದಲೇ ಅಧ್ಯಕ್ಷರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗ್ರಾಪಂ ಸದಸ್ಯರಾಗಿ ನಾವು ಆಯ್ಕೆಯಾಗಿ 9 ತಿಂಗಳಾದರೂ ನಮ್ಮ ಗ್ರಾಮಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗಲಿಲ್ಲ. ಗ್ರಾಮಗಳಲ್ಲಿ ಸಮಸ್ಯೆ ತಾಂಡವವಾಡುತ್ತಿದ್ದು, ಇದರ ಬಗ್ಗೆ ಅಧ್ಯಕ್ಷರು ಮತ್ತು ಪಿಡಿಒ ಗಮನಕ್ಕೆ ತಂದರೂ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರು ಹಲವು ಸಮಸ್ಯೆ ಹೊತ್ತು ಪಂಚಾಯಿತಿಗೆ ಬಂದರೂ ಕೇಳುವವರೇ ಇಲ್ಲದಂತಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿದ್ದರೂ ಅಧ್ಯಕ್ಷರು ಹಣ ಹಂಚಿಕೆ ಮಾಡದೆ ಸ್ವಗ್ರಾಮ ಮರವಹಳ್ಳಿಗೆ ಮಾತ್ರ ಬಳಸಿಕೊಂಡಿದ್ದಾರೆ. ಅಭಿವೃದ್ಧಿಗೆ ಅನುದಾನ ಬಂದಿಲ್ಲವೆಂದಾದರೆ ನಿಮ್ಮ ಗ್ರಾಮಕ್ಕೆ ಮಾತ್ರ ಹಣ ಎಲ್ಲಿಂದ ಬಂತು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಗ್ರಾಪಂ ಅಧ್ಯಕ್ಷರು ಸದಸ್ಯರ ಮಾತಿಗೆ ಕ್ಯಾರೇ ಎನ್ನದೆ ಉಡಾಫೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ 9 ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು.
ಸದಸ್ಯರೊಂದಿಗೆ ಯಾವುದೇ ಮನಸ್ತಾಪ ಇಲ್ಲ, ಅಭಿವೃದ್ಧಿ ವಿಚಾರದಲ್ಲಿ ಸಣ್ಣ-ಪುಟ್ಟ ಗೊಂದಲ ಇದ್ದು, ಎಲ್ಲವನ್ನೂ ನಿವಾರಿಸಿಕೊಂಡು ಅಭಿವೃದ್ಧಿ ಕಡೆ ಗಮನ ಹರಿಸಲಾಗುವುದು.
ಮಂಜುನಾಥ , ಗ್ರಾಪಂ ಅಧ್ಯಕ್ಷ