ನ್ಯೂಸ್

2.28 ಲಕ್ಷ ಜನರಿಂದ ಮೃಗಾಲಯ ವೀಕ್ಷಣೆ

ಮೈಸೂರು; ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಡಿಸೆಂಬರ್ ಕೊನೇ ವಾರದಲ್ಲಿ ನಿರೀಕ್ಷೆ ಮೀರಿ ಪ್ರವಾಸಿಗರು ಭೇಟಿ ನೀಡಿದ್ದು, ಡಿ. 23ರಿಂದ 30ರ ವರೆಗೆ ಬರೋಬ್ಬರಿ 2.28 ಲಕ್ಷ ಜನರು ಮೃಗಾಲಯ ವೀಕ್ಷಣೆ ಮಾಡಿದ್ದಾರೆ.


ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ನಗರಕ್ಕೆ ಬಂದಿರುವ ಸಹಸ್ರಾರು ಪ್ರವಾಸಿಗರು ಮೃಗಾಲಯಕ್ಕೂ ಭೇಟಿ ನೀಡಿ ವನ್ಯಜೀವಿಗಳನ್ನು ಕಣ್ತುಂಬಿಕೊಂಡಿದ್ದಾರೆ.


ಕ್ರಿಸ್‌ಮಸ್ ಹಬ್ಬದ ಎರಡು ದಿನಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸಂದರ್ಶಕರು ಇಲ್ಲಿಗೆ ದೌಡಾಯಿಸಿದ್ದಾರೆ. ಡಿ. 24 ಮತ್ತು 25ರಂದು ಕ್ರಮವಾಗಿ 40 ಸಾವಿರ ಮತ್ತು 35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.


ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 10 ದಿನಗಳ ಅವಧಿಯಲ್ಲಿ ಚಾಮರಾಜೇಂದ್ರ ಮೃಗಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಸಾರ್ವಜನಿಕರು ಭೇಟಿ ನೀಡಿದ್ದರು.

ಈ ಅವಧಿಯಲ್ಲಿ 1,65,003 ಜನರು ಆಗಮಿಸಿದ್ದರು. ಇದನ್ನು ಹೊರತುಪಡಿಸಿದರೆ, ಡಿಸೆಂಬರ್ ಕೊನೆಯ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬಂದಿರುವುದು ಮೃಗಾಲಯಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ಹರಿದು ಬರಲು ನೆರವಾಗಿದೆ.

ದಿನ ಪ್ರವಾಸಿಗರ ಸಂಖ್ಯೆ
ಡಿ.23 25,860
ಡಿ.24 40,761
ಡಿ.25 35,344
ಡಿ.26 14,476
ಡಿ.27 28,425
ಡಿ.28 29,906
ಡಿ.29 26,450
ಡಿ.30 27,092
ಒಟ್ಟು 2,28,314