ನ್ಯೂಸ್

ಸಮಾಜಮುಖಿ ಧ್ವನಿ ಅಡಗಿಸಲು ಯತ್ನಿಸುವ ದುಷ್ಟ ಶಕ್ತಿಗಳೆಡೆಗೆ ನಮ್ಮದು 'ಜೀರೊ ಟಾಲರೆನ್ಸ್': ಸಿಎಂ ಸಿದ್ದರಾಮಯ್ಯ

Ravikanth Kundapura

ಬೆಂಗಳೂರು: ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ರಾಜಕೀಯ ನಾಯಕರು ಮತ್ತು ಧರ್ಮ ಗುರುಗಳಿಗೆ ಪತ್ರಗಳ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದ ದಾವಣಗೆರೆ ಮೂಲದ ಶಿವಾಜಿರಾವ್ ಜಾಧವ್ ಎಂಬ ಆರೋಪಿಯ ಬಂಧನದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಆರೋಪಿ ಶಿವಾಜಿರಾವ್​ ಜಾಧವ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆರೋಪಿಯ ಜೊತೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಶಾಮೀಲಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನ ಕೈಗಳಿಗೆ ಒಪ್ಪಿಸುವ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ನಾಡಿನ ಪ್ರತಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಿದೆ ಎಂದಿರುವ ಸಿಎಂ ಸಿದ್ದರಾಮಯ್ಯ, ಸಮಾಜಮುಖಿ ಧ್ವನಿಯನ್ನು ಅಡಗಿಸಲು ಯತ್ನಿಸುವ ದುಷ್ಟ ಶಕ್ತಿಗಳೆಡೆಗೆ ನಮ್ಮದು 'ಜೀರೊ ಟಾಲರೆನ್ಸ್' ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.