ನ್ಯೂಸ್

ನಾನು ಹಿಂದು… ಹಮಾರಾ ದೇಶ್ ಹಿಂದುಸ್ಥಾನ್; ಹಿಂದುತ್ವದ ಜಪ ಮಾಡಿದ ಜಮೀರ್

ಕಲಬುರಗಿ: ನಾನು ಹಿಂದು... ಹಮಾರ್ ದೇಶ್ ಹಿಂದುಸ್ಥಾನ್ ಎಂದು ಹೇಳುವ ಮೂಲಕ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಜಾಧ್ವನಿ ಸಮಾವೇಶ ಹಿಂದುತ್ವದ ಜಪ ಮಾಡಿದ್ದಾರೆ.

ಶಾಸಕ‌ ಜಮೀರ್ ಅಹ್ಮದ್ ಖಾನ್ ಮಾತನಾಡುತ್ತಾ, ಕರ್ನಾಟಕದ ಜನ ಬಿಜೆಪಿಗೆ ಯಾವತ್ತೂ ಆಶಿರ್ವಾದ ಮಾಡಿಲ್ಲ. ಬರೀ ಅಪರೇಶನ್ ಕಮಲ ಮಾಡಿಯೇ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜಮೀರ್ ಅಹ್ಮದ್ ಟೀಕಿಸುತ್ತಾ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸದೇ ಹೋದಲ್ಲಿ ರಾಜ್ಯದ ಜನರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ಭಾಷಣ ಮಾಡುತ್ತಿದ್ದಾಗ, ಅಲ್ಪಸಂಖ್ಯಾತರ ಮನವಿ ಹಿನ್ನಲೆಯಲ್ಲಿ ಹಿಂದಿಯಲ್ಲಿ ಭಾಷಣ ಮುಂದುವರಿಸಿದ ಜಮೀರ್, 2013ರಿಂದ 2018ರವರೆಗೆ ಅನೇಕ ಜನಪರ ಭಾಗ್ಯಗಳನ್ನು ನೀಡಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದಂತಹ ಭಾಗ್ಯಗಳನ್ನು ಮುಂದೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ದೇವೆಗೌಡರು ಹಾಗೂ ಎಚ್​.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆದರೆ ಇವರಿಬ್ಬರು ಅಲ್ಪಸಂಖ್ಯಾತರ ಗೋಳು ಕೇಳಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.