ನ್ಯೂಸ್

ದೆಹಲಿ ಗಲಭೆಯಲ್ಲಿ ಝಾಕೀರ್​ ನಾಯ್ಕ್​ ಕೈವಾಡ...? ಭಾರತಕ್ಕೆ ಒಪ್ಪಿಸಲು ಮಲೇಷ್ಯಾಗೆ ಒತ್ತಡ

ನವದೆಹಲಿ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಭಾರತದಿಂದ ನಾಪತ್ತೆಯಾಗಿ ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿರುವ ಇಸ್ಲಾಮಿಕ್​ ಧರ್ಮ ಪ್ರಚಾರಕ ಝಾಕೀರ್​ ನಾಯ್ಕ್​ ಕೊರಳಿಗೆ ಈಗ ಮತ್ತೊಂದು ಉರುಳು ಸುತ್ತಿಕೊಂಡಿದೆ.

ದೆಹಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಗಲಭೆ ಆರೋಪಿಯಾಗಿರುವ ಖಾಲೀದ್​ ಸೈಫಿ ವಿದೇಶದಲ್ಲಿ ಝಾಕೀರ್​ ನಾಯ್ಕ್​ನನ್ನು ಭೇಟಿಯಾಗಿದ್ದ. ಆತನ ಅಜೆಂಡಾವನ್ನು ಭಾರತದಲ್ಲಿ ಪಸರಿಸುವುದಾಗಿ ಒಪ್ಪಿಕೊಂಡಿದ್ದ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಆದರೆ, ಈ ಆರೋಪವನ್ನು ಝಾಕೀರ್​ ನಾಯ್ಕ್​ ನಿರಾಕರಿಸಿದ್ದಾನೆ. ತಾನು ಖಾಲೀದ್​ ಸೈಫಿ ಎನ್ನುವ ಯಾರನ್ನೂ ಭೇಟಿಯಾಗಿಲ್ಲ ಎಂದು ಆತ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಬೆಳವಣಿಗೆಯಿಂದಾಗಿ ಇಸ್ಲಾಮಿಕ್​ ಧರ್ಮ ಪ್ರಚಾರಕನ ಕುರಿತಾದ ಧಾರ್ಮಿಕ ಹಾಗೂ ರಾಜಕೀಯ ಚರ್ಚೆಗಳು ಮತ್ತೆ ಬಿರುಸು ಪಡೆದುಕೊಂಡಂತಾಗಿದೆ. ಮಲೇಷ್ಯಾದಲ್ಲಿ ಆಶ್ರಯ ಪಡೆದುಕೊಂಡಿರುವ ಈತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮೇ 14 ರಂದು ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಈತನ ವಿರುದ್ಧ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ಕೋಮುದ್ವೇಷ ಕೆರಳಿಸುವ ಭಾಷಣ, ಅಕ್ರಮ ಆಸ್ತಿ ಖರೀದಿ ಆರೋಪಗಳಿವೆ. ಜತೆಗೆ, 2016ರಲ್ಲಿ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ನಡೆದ ಬಾಂಬ್​ ಸ್ಫೋಟಕ್ಕೆ ಈತನ ಭಾಷಣವೇ ಪ್ರಚೋದನೆ ಆರೋಪಿ ಹೇಳಿಕೊಂಡಿದ್ದ.