ಅಹಮದಾಬಾದ್: ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆಗೆ ಸಾಕ್ಷಿಯಾಗಿದ್ದ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ(Zakia Jafri) ಶನಿವಾರ(ಫೆಬ್ರವರಿ 1) ಅಹಮದಾಬಾದ್ನಲ್ಲಿ ಮೃತಪಟ್ಟಿದ್ದಾರೆ. ಜಾಕಿಯಾ ಜಾಫ್ರಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಯಿಂದ ನಿಧನರಾದರು ಎನ್ನಲಾಗಿದೆ.
ಇದನ್ನು ಓದಿ: ರೀಲ್ಸ್ ನೋಡುವುದರಲ್ಲಿ ವೈದ್ಯ ಬ್ಯುಸಿ; ಚಿಕಿತ್ಸೆಗಾಗಿ ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು | UP hospital
28 ಫೆಬ್ರವರಿ 2002ರಂದು ನಡೆದ ಗಲಭೆಯಲ್ಲಿ ಎಹ್ಸಾನ್ ಜಾಫ್ರಿ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಹತ್ಯೆಗೀಡಾದರು. ನಂತರ ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ಎಸ್‌ಐಟಿ ನೀಡಿದ ಕ್ಲೀನ್ ಚಿಟ್ ಅನ್ನು ಝಕಿಯಾ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 2017ರ ಗುಜರಾತ್ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಪ್ರಕರಣದಲ್ಲಿ ಎಸ್‌ಐಟಿ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಅಂಗೀಕರಿಸುವ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಗುಜರಾತ್ ಗಲಭೆಯ ನಂತರ ಝಾಕಿಯಾ ಜಾಫ್ರಿ 2006ರಲ್ಲಿ ಗುಜರಾತ್‌ನ ಅಂದಿನ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಕೊಲೆ (ಸೆಕ್ಷನ್ 302) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಅಂದು ಗುಜರಾತಿನ ಸಿಎಂ ಆಗಿದ್ದ ನರೇಂದ್ರ ಮೋದಿ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ದೂರು ನೀಡಿದ್ದರು.
ಗಲಭೆಗೆ ಸಂಬಂಧಿಸಿದ ಹಲವಾರು ವಿಚಾರಣೆಗಳ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಎಸ್‌ಐಟಿಯನ್ನು ರಚಿಸಿತ್ತು. ನಂತರ ಜಾಫ್ರಿ ಸಲ್ಲಿಸಿದ ದೂರಿನ ತನಿಖೆಗೆ ಎಸ್‌ಐಟಿಗೆ ಆದೇಶಿಸಲಾಯಿತು. SIT ವರದಿ ಮೋದಿಗೆ ಕ್ಲೀನ್ ಚಿಟ್ ನೀಡಿದೆ. 2011ರಲ್ಲಿ ಸುಪ್ರೀಂ ಕೋರ್ಟ್ ತನ್ನ ಮುಕ್ತಾಯದ ವರದಿಯನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಿತು ಮತ್ತು ಈ ವರದಿಯ ಮೇಲೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡಲಾಯಿತು.
2013ರಲ್ಲಿ ಅರ್ಜಿದಾರರು ಮುಚ್ಚುವಿಕೆಯ ವರದಿಯನ್ನು ವಿರೋಧಿಸಿ ಅರ್ಜಿಯನ್ನು ಸಲ್ಲಿಸಿದರು. ಮ್ಯಾಜಿಸ್ಟ್ರೇಟ್ ಎಸ್‌ಐಟಿಯ ಮುಕ್ತಾಯ ವರದಿಯನ್ನು ಎತ್ತಿಹಿಡಿದು ಜಾಫ್ರಿ ಅವರ ಮನವಿಯನ್ನು ತಿರಸ್ಕರಿಸಿದರು. ನಂತರ ಝಾಕಿಯಾ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2017ರಲ್ಲಿ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ತೀರ್ಪನ್ನು ಎತ್ತಿಹಿಡಿದು ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಎಸ್‌ಐಟಿಯ ಕ್ಲೀನ್ ಚಿಟ್ ಸ್ವೀಕರಿಸುವ ಈ ನಿರ್ಧಾರವನ್ನು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರೊಂದಿಗೆ ಜಾಫ್ರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನನ್ನ ತಾಯಿ ಜನವರಿಯಲ್ಲಿ ಅಮೆರಿಕಾದಿಂದ ಆಗಮಿಸಿದ ನಂತರ ನನ್ನ ಸಹೋದರಿಯೊಂದಿಗೆ ಅಹಮದಾಬಾದ್‌ನಲ್ಲಿರುವ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಬೆಳಗಿನ ದಿನಚರಿಯನ್ನು ಮುಗಿಸಿ ಉಪಹಾರ ಸೇವಿಸಿದ ನಂತರ ನನ್ನ ತಾಯಿಗೆ ಅಸ್ವಸ್ಥನೆನಿಸತೊಡಗಿತು. ತನ್ನ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ನನ್ನ ಸಹೋದರಿ ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು ನನ್ನ ತಾಯಿಯನ್ನು ಪರೀಕ್ಷಿಸಿ.ಅವರು ಮೃತಪಟ್ಟಿರುವುದಾಗಿ ತಿಳಿಸಿದರುಎ ಎಂದು ಝಕಿಯಾ ಜಾಫ್ರಿ ಅವರ ಮಗ ತನ್ವಿರ್ ಜಾಫ್ರಿ ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.(ಏಜೆನ್ಸೀಸ್)