ಬೆಂಗಳೂರು: ಬಿಜೆಪಿ ಹೆಸರನ್ನು ಭಾರತೀಯ ಜೇಬ್ ಕಾಟೋ ಪಾರ್ಟಿ (ಭಾರತೀಯ ಜನರ ಜೇಬು ಕತ್ತರಿಸುವ ಪಕ್ಷ) ಎಂದು ಬದಲಾಯಿಸಬೇಕಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಣದೀಪ್ ಸಿಂಗ್ ಸುರ್ಜೇವಾಲಾ, ಜುಲೈ 1ರಿಂದ ಟೋಲ್ ಮತ್ತು ರೈಲು ಟಿಕೆಟ್ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರಿದರೆ ದಿನಬಳಕೆ ವಸ್ತುಗಳಿಗೆ ಝಡ್ ಪ್ಲಸ್ ಸೆಕ್ಯುರಿಟಿ ನೀಡಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ಜನಸಾಮಾನ್ಯರ ಜೇಬಿಗೆ ಕೈ ಹಾಕಿ ದಾಳಿ ಮಾಡಿದೆ. ಹೆದ್ದಾರಿ ಕಳ್ಳತನ, ರೈಲ್ವೇ ಹಳಿಗಳ ಮೂಲಕ ನಡೆಸುತ್ತಿರುವ ದರೋಡೆ. ಸಾರ್ವಜನಿಕವಾಗಿ ಜನರನ್ನು ಪಿಕ್ ಪಾಕೆಟ್ ಮಾಡುವ ಷಡ್ಯಂತ್ರ. ಈ ಕೂಡಲೇ ಬಿಜೆಪಿಯು ರೈಲು ಟಿಕೆಟ್ ದರ ಏರಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜು.1ರಿಂದ ರೈಲ್ವೇ ಟಿಕೆಟ್ ದರ ಹೆಚ್ಚಳ ಮಾಡಿ 700 ಕೋಟಿ ರೂ. ಹೊರೆಯನ್ನು ಜನರಿಂದ ವಸೂಲಿ ಮಾಡುತ್ತಿದೆ. ಟೋಲ್ ಬೆಲೆ ಏರಿಕೆಯ ಕೊಡುಗೆ ನೀಡಿತ್ತು. ಈಗ ರೈಲ್ವೇ ಬೆಲೆ ಏರಿಕೆ ಮಾಡಿ ಹೊಸ ಕೊಡುಗೆ ನೀಡಿದೆ. ಈಗ ಬೆಂಗಳೂರು ಎಲೆವೇಟೆಡ್ ಕಾರಿಡಾರ್ ಟೋಲ್ ಬೆಲೆಯನ್ನು ಹೆಚ್ಚಳ ಮಾಡಿ ಬರೆ ಹಾಕಿದೆ. ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ 10 ಸಾವಿರ ಕೋಟಿ ರೂ. ಟೋಲ್ ಸಂಗ್ರಹವಾಗಿದೆ. 2024ರಲ್ಲಿ 4.86 ಸಾವಿರ ಕೋಟಿ ರೂ. ಅನ್ನು ಜನರು ಟೋಲ್ಗಾಗಿ ತೆತ್ತಿದ್ದಾರೆ. ಹೊಸೂರು ಟೋಲ್ ಪ್ಲಾಜಾದಲ್ಲಿ ಮತ್ತೆ ಕೇಂದ್ರ ಸರ್ಕಾರ ದರ ಹೆಚ್ಚಳ ಮಾಡಿ ಸುಲಿಗೆಗೆ ಇಳಿದಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಅಭಿಷೇಕ್ ದತ್, ಬಿ.ಎಲ್. ಶಂಕರ್, ರಮೇಶ್ ಬಾಬು ಉಪಸ್ಥಿತರಿದ್ದರು.