ನ್ಯೂಸ್

ಯೂನಸ್ ಕೈಗೆ ಬಾಂಗ್ಲಾ ಚುಕ್ಕಾಣಿ: ಇಂದೇ ಪ್ರಮಾಣವಚನ

ಢಾಕಾ: ಮೀಸಲಾತಿ ನೀತಿ ವಿರುದ್ಧವಾಗಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯಿಂದ ಶಾಂತಿ-ಸುವ್ಯವಸ್ಥೆ ಕದಡಿ ಹೋಗಿರುವ ಬಾಂಗ್ಲಾದೇಶದ ಅಧಿಕಾರದ ಚುಕ್ಕಾಣಿ ನೊಬೆಲ್ ಶಾಂತಿ ಪುರಸ್ಕೃತ ಮುಹಮ್ಮದ್ ಯೂನಸ್ ಕೈಗೆ ಸಿಗುವುದು ಖಚಿತವಾಗಿದೆ. ಸೇನೆ ಬೆಂಬಲದಲ್ಲಿ ಅವರು ಮಧ್ಯಂತರ ಸರ್ಕಾರ ರಚನೆ ಮಾಡಲಿರುವುದು ನಿಚ್ಚಳವಾಗಿದ್ದು, ಗುರುವಾರವೇ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರತಿಭಟನೆಯ ತೀವ್ರತೆಗೆ ಶೇಕ್ ಆದ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾದ ಬಳಿಕ ಬಾಂಗ್ಲಾದೇಶದ ಮುಂದಿನ ನಾಯಕತ್ವ ಕುರಿತು ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಹಾಗೂ ಅಧ್ಯಕ್ಷ ಮೊಹಮ್ಮದ್ ಷಹಬುದ್ದೀನ್ ಮಂಗಳವಾರ ರಾತ್ರಿ ಚರ್ಚೆ ನಡೆಸಿದ್ದು, ಮಧ್ಯಂತರ ಸರ್ಕಾರದ ನಾಯಕನಾಗಿ ಮುಹಮ್ಮದ್ ಯೂನಸ್ ಅವರನ್ನು ನೇಮಿಸಲಾಗಿದೆ. ‘ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚಿಸಲು ನಿರ್ಧರಿಸಲಾಗಿದೆ’ ಎಂದು ಬಾಂಗ್ಲಾದೇಶದ ಅಧ್ಯಕ್ಷರ ಕಚೇರಿ ಘೋಷಿಸಿದೆ. ಅಷ್ಟೇ ಅಲ್ಲ, ಮುಹಮ್ಮದ್ ಯೂನಸ್ ಗುರುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯೂನಸ್ ಜತೆ 15 ಮಂದಿಯ ಸಲಹಾ ಸಮಿತಿ ಕೂಡ ಇರಲಿದೆ. ಯೂನಸ್ ಪ್ರಜಾಪ್ರಭುತ್ವದ ಪ್ರಕ್ರಿಯೆ ಮೂಲಕ ಬಾಂಗ್ಲಾದೇಶವನ್ನು ಮುನ್ನಡೆಸಲಿದ್ದಾರೆ ಎಂದು ಸೇನಾ ಮುಖ್ಯಸ್ಥ ವಾಕರ್ ತಿಳಿಸಿದ್ದಾರೆ. ಯೂನಸ್​ಗೆ ಮುಖ್ಯ ಸಲಹೆಗಾರ ಎಂಬ ಪದನಾಮ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ‘ನಾನು ಮನೆಗೆ ಹಿಂದಿರುಗುವುದನ್ನು ಎದುರು ನೋಡುತ್ತಿದ್ದೇನೆ. ಏನಾಗುತ್ತಿದೆ.. ನಾವೀಗ ಇರುವ ಸಮಸ್ಯೆಯಿಂದ ಹೊರಬರಲು ಹೇಗೆ ಸಂಘಟಿತರಾಗಬೇಕು ಎನ್ನುವುದನ್ನು ಗಮನಿಸುತ್ತಿದ್ದೇನೆ. ನಾವು ಹಿಂಸೆಯ ದಾರಿ ಹಿಡಿದರೆ ಎಲ್ಲವೂ ಹಾಳಾಗುತ್ತದೆ’ ಎಂದು ಯೂನಸ್ ಪ್ಯಾರಿಸ್​ನ ಚಾರ್ಲ್ಸ್ ಡಿ ಗೌಲೆ ಏರ್​ಪೋರ್ಟ್​ನಿಂದ ದುಬೈಗೆ ಹೊರಟಿದ್ದಾಗ ಸುದ್ದಿಗಾರರಿಗೆ ತಿಳಿಸಿದರು.

ಸೇನೆಯಲ್ಲಿ ಭಾರಿ ಬದಲಾವಣೆ: ಬಾಂಗ್ಲಾ ಸೇನೆಯಲ್ಲೂ ಭಾರಿ ಬದಲಾವಣೆಗಳು ಆಗಿವೆ. ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ಪ್ಯಾರಾಮಿಲಿಟರಿ ಪೋರ್ಸ್ ಕಮಾಂಡರ್ ಜಿಯೌಲ್ ಅಹ್ಸನ್ ಅವರನ್ನು ವಜಾ ಮಾಡಲಾಗಿದೆ. ಅಲ್ಲದೆ, ಶೇಖ್ ಹಸೀನಾಗೆ ಆಪ್ತರಿದ್ದ ಕೆಲವು ಜನರಲ್​ಗಳಿಗೆ ಹಿಂಬಡ್ತಿ ನೀಡಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಏರ್ ಇಂಡಿಯಾ ಸಾಹಸ: ಏರ್ ಇಂಡಿಯಾ ವಿಮಾನವು ಢಾಕಾದಿಂದ 199 ಪ್ರಯಾಣಿಕರು ಮತ್ತು 6 ಶಿಶುಗಳನ್ನು ಕರೆದುಕೊಂಡು ಬುಧವಾರ ಬೆಳಗ್ಗೆ ದೆಹಲಿಗೆ ಬಂದಿಳಿದಿದೆ. ಸವಾಲು- ಆತಂಕಗಳ ನಡುವೆಯೂ ಏರ್ ಇಂಡಿಯಾ ವಿಶೇಷ ವಿಮಾನ ಢಾಕಾದಿಂದ ಇಂದು ದೆಹಲಿಗೆ ಬಂದಿದೆ.

ಅಮೆರಿಕ ವೀಸಾ ರದ್ದು: ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಯುಕೆ ಮತ್ತು ಯುಎಇನಲ್ಲಿ ಆಶ್ರಯಕ್ಕಾಗಿ ಅನ್ವೇಷಿಸುತ್ತಿರುವ ಹಿನ್ನೆಲೆಯಲ್ಲಿ ಯುಕೆ ವೀಸಾ ನಿರ್ಬಂಧಿಸಿದೆ. ಅದರ ಬೆನ್ನಿಗೇ ಯುಎಸ್ ಕೂಡ ಆಕೆಯ ವೀಸಾ ರದ್ದುಗೊಳಿಸಿದೆ ಎನ್ನಲಾಗಿದೆ. ಹಸೀನಾರ ನಿರಂಕುಶವಾದಿತ್ವವೇ ಈ ನಡೆಗೆ ಕಾರಣ ಎಂದೂ ಹೇಳಲಾಗಿದೆ. ಈ ಮೂಲಕ ಕಳೆದ ಕೆಲವು ತಿಂಗಳಿನಿಂದ ಬಿಕ್ಕಟ್ಟಿನಲ್ಲಿದ್ದ ಅಮೆರಿಕ-ಬಾಂಗ್ಲಾದೇಶದ ಸಂಬಂಧ ಇನ್ನಷ್ಟು ಬಿಗಡಾಯಿಸಿದಂತಾಗಿದೆ.

ಅಶಾಂತಿ ನಡುವೆಯೇ ಕಾರ್ಯ: ಬಾಂಗ್ಲಾದೇಶದಲ್ಲಿನ ಭಾರತೀಯ ರಾಯಭಾರ ಕಚೇರಿ ಅಶಾಂತಿಯ ನಡುವೆಯೂ ಕಾರ್ಯನಿರ್ವಹಿಸುತ್ತಿದೆ. ಹಿರಿಯ ರಾಜತಾಂತ್ರಿಕರು ಮತ್ತು ಅಗತ್ಯ ಸಿಬ್ಬಂದಿ ದೇಶದಲ್ಲಿ ವಾಸ್ತವ್ಯ ಮುಂದುವರಿಸಿದ್ದಾರೆ. ಉಪಸ್ಥಿತಿ ಅನಿವಾರ್ಯವಲ್ಲದ ಸಿಬ್ಬಂದಿ ಭಾರತಕ್ಕೆ ಬಂದು ಸ್ವದೇಶದಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

20 ದೇವಸ್ಥಾನಗಳಿಗೆ ಹಾನಿ: ಬಾಂಗ್ಲಾದೇಶದಲ್ಲಿ 15ರಿಂದ 20 ದೇವಸ್ಥಾನಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಲಾಗಿದೆ. 200ರಿಂದ 300 ಮನೆಗಳ ಮೇಲೆ ದಾಳಿ ಮಾಡಲಾಗಿದ್ದ, ಅವುಗಳಲ್ಲಿ ಬಹುತೇಕ ಮನೆಗಳು ಹಿಂದುಗಳದ್ದಾಗಿವೆ. ಈ ದಾಳಿ ವೇಳೆ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಬಾಂಗ್ಲಾದೇಶದಲ್ಲಿನ ಹಿಂದು ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟ್ ಕೌನ್ಸಿಲ್​ನ ಪ್ರಧಾನ ಕಾರ್ಯದರ್ಶಿ ರಾಣಾ ದಾಸ್​ಗುಪ್ತ ತಿಳಿಸಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶದ ಹಿಂಸಾಚಾರದಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರು ಮತ್ತು ಅವರ ಕುಟುಂಬಸ್ಥರ 29 ಮಂದಿಯ ಶವಗಳು ಸಿಕ್ಕಿವೆ.

ಆತಂಕದಲ್ಲಿ ಭಾರತೀಯರು: ಬಾಂಗ್ಲಾದೇಶದಲ್ಲಿ 9 ಸಾವಿರ ವಿದ್ಯಾರ್ಥಿಗಳು ಸೇರಿದಂತೆ 19 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ. ಅಲ್ಲಿನ ಭಾರತೀಯ ಸಮುದಾಯದವರ ಜತೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ಇರಿಸಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದ್ದರು. ಬಾಂಗ್ಲಾದೇಶದಲ್ಲಿ 17 ಕೋಟಿ ಜನಸಂಖ್ಯೆ ಇದ್ದು, ಅದರ ಶೇ.8ರಷ್ಟು ಹಿಂದುಗಳಿದ್ದಾರೆ.

ಸದ್ಯ ಭಾರತವೇ ಆಶ್ರಯ: ಬಾಂಗ್ಲಾದೇಶದಲ್ಲಿನ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಭಾರತಕ್ಕೆ ಬಂದಿರುವ ಶೇಖ್ ಹಸೀನಾ, ಸದ್ಯ ಭಾರತದಲ್ಲೇ ಇರಲಿದ್ದಾರೆ ಎನ್ನುವುದನ್ನು ಆಕೆಯ ಪುತ್ರ ಸಾಜೀದ್ ವಾಜೆಬ್ ಜಾಯ್ ಸ್ಪಷ್ಟಪಡಿಸಿದ್ದಾರೆ. ‘ಅವರು ಮತ್ತೊಂದು ದೇಶಕ್ಕೆ ತೆರಳುತ್ತಾರೆ ಎನ್ನುವುದೆಲ್ಲ ವದಂತಿಗಳು. ಆ ಬಗ್ಗೆ ಅವರು ಇನ್ನೂ ಏನೂ ನಿರ್ಧರಿಸಿಲ್ಲ. ಸ್ವಲ್ಪ ಸಮಯ ದೆಹಲಿಯಲ್ಲೇ ಇರಲಿದ್ದಾರೆ, ಅವರೊಂದಿಗೆ ನನ್ನ ಸಹೋದರಿ ಕೂಡ ಇದ್ದಾರೆ’ ಎಂದು ಸಾಜೀದ್ ಸುದ್ದಿಗಾರರಿಗೆ ಹೇಳಿದ್ದಾರೆ. ಹಸೀನಾ ಪುತ್ರಿ ಸೈಮಾ ವಾಜೆದ್ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಆಗಿದ್ದು, ಅದರ ಪ್ರಧಾನ ಕಚೇರಿ ದೆಹಲಿಯಲ್ಲಿದೆ.

ಗಡಿಯಲ್ಲಿ ಕರ್ಫ್ಯೂ: ದಂಗೆ ಹಿನ್ನೆಲೆಯಲ್ಲಿ ಮಣಿಪುರ ಗಡಿಭಾಗದಲ್ಲೂ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಬಾಂಗ್ಲಾ ದಿಂದ ನುಸುಳುಕೋರರು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಎಂದು ಮಣಿಪುರದ ಅಧಿಕಾರಿಗಳು ತಿಳಿಸಿದ್ದಾರೆ. ಮೇಘಾಲಯ ಗಡಿಭಾಗದಲ್ಲೂ ಈ ಮೊದಲೇ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.