ನ್ಯೂಸ್

ಯುಗಾದಿ ಕವನ: ಕೆ.ಎಸ್.ನರಸಿಂಹಸ್ವಾಮಿ

ಮಾವು ನಾವು, ಬೇವು ನಾವು;

ನೋವು ನಲಿವು ನಮ್ಮವು.

ಹೂವು ನಾವು, ಹಸಿರು ನಾವು,

ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-

ಹೊಸತು ಬಯಕೆ ನಮ್ಮವು

ತಳಿರ ತುಂಬಿದಾಸೆಯೆಲ್ಲ,

ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ

ಹೊಳೆಯ ದಿಕ್ಕು ಬದಲಿಸಿ

ಕಾಡ ಕಡಿದು ದಾರಿ ಮಾಡಿ

ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ

ಧ್ವಜವನಿಟ್ಟು ಬಂದೆವು;

ಧ್ರುವಗಳಲ್ಲಿ ಹೆಜ್ಜೆಯೂರಿ

ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ

ನಮ್ಮ ಕಿಡಿಯ ಮುತ್ತಿಗೆ.

ಮುಗಿಯಬಹುದು ನಾಳೆಯೊಳಗೆ

ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;

ಉಟ್ಟ ಸೀರೆ ಸಾಗರ.

ಅವಳ ಮುಗಿಲ ತುರುಬಿನಲ್ಲಿ

ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;

ಅವಳ ಕಣ್ಣು ಕಾವಲು.

ಬಿಸಿಲ ತಾಪ, ಮಳೆಯ ಕೋಪ-

ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-

ಚೆಲುವು ನಮ್ಮ ಜೀವನ!

ನಮ್ಮ ಹಾದಿಯೋ ಅನಾದಿ,

ಪಯಣವೆಲ್ಲ ಪಾವನ.

| ಕೆ.ಎಸ್. ನರಸಿಂಹಸ್ವಾಮಿ