ನ್ಯೂಸ್

ಆಭರಣ, ಹಣ ತೋರಿಸಿದ್ದ ಯೂಟ್ಯೂಬರ್‌ ಮನೆಗೆ ಕನ್ನ; 1 ಕೋಟಿ ಮೌಲ್ಯದ ಬಂಗಾರ ಕಳವು | YouTuber's house Theft

ಕನ್ಯಾಕುಮಾರಿಯ ಯೂಟ್ಯೂಬರ್ ಹಾಗೂ ಉದ್ಯಮಿ ಪತಿ ಮನೆಗೆ ಕನ್ನ ಹಾಕಲಾಗಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದು ಕಳವಾಗಿದೆ. ಈ ಪ್ರಕರಣದಲ್ಲಿ ಯೂಟ್ಯೂಬರ್‌ರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕನ್ಯಾಕುಮಾರಿ ಯೂಟ್ಯೂಬರ್ ಮನೆಗೆ ಕನ್ನ

ಸುಮಾರು 1 ಕೋಟಿ ರೂ. ಮೌಲ್ಯದ ವಸ್ತುಗಳ ಕಳವು

944 ಗ್ರಾಂ ಚಿನ್ನಾಭರಣ ಕಳುವಾಗಿರುವ ಶಂಕೆ

YouTuber: ಕನ್ಯಾಕುಮಾರಿ ಮೂಲದ ಯೂಟ್ಯೂಬರ್ ಹಾಗೂ ಅವರ ಉದ್ಯಮಿ ಪತಿ ಮನೆಗೆ ಕನ್ನ ಹಾಕಲಾಗಿದೆ. ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ, ವಜ್ರಾಭರಣ ಹಾಗೂ ನಗದು ಕಳುವಾಗಿದೆ.

ನಾಗರ್‌ಕೋಯಿಲ್‌ನ ವಿಐಪಿ ಗಾರ್ಡನ್‌ನಲ್ಲಿರುವ ಮಧುಮಿತಾ ಹಾಗೂ ಅವರ ಪತಿ ವಿನೋತ್ ಕುಮಾರ್ ಮನೆಗೆ ಕನ್ನ ಹಾಕಲಾಗಿದೆ. ಸೆ. 24ರಂದು ಕುಟುಂಬ ತಿರುನೆಲ್ವೇಲಿಗೆ ತೆರಳಿ ರಾತ್ರಿ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಸುಮಾರು 118 ಸವರನ್ (944 ಗ್ರಾಂ) ಚಿನ್ನಾಭರಣ, ವಜ್ರಾಭರಣ ಹಾಗೂ 50 ಸಾವಿರ ರೂ. ನಗದು ಕಳುವಾಗಿದೆ. ಹಿಂಬಾಗಿಲಿನ ಲಾಕ್ ಮುರಿದು ಕಳ್ಳರು ಒಳನುಗ್ಗಿರುವ ಶಂಕೆ ಇದೆ.

ಬೀಗ ಒಡೆಯಲು ಮರ ಕತ್ತರಿಸುವ ಯಂತ್ರ ಅಥವಾ ಇದೇ ರೀತಿಯ ಉಪಕರಣ ಬಳಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ತನಿಖೆ

ಮಧುಮಿತಾ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಚಿನ್ನಾಭರಣ, ಹಣ, ಶಾಪಿಂಗ್ ಹಾಗೂ ಕುಟುಂಬದ ಪ್ರವಾಸದ ಕುರಿತ ಹಲವು ಪೋಸ್ಟ್‌ಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆಭರಣ ಖರೀದಿಸಿದ ಮಾಹಿತಿ

ಅವರ ಯೂಟ್ಯೂಬ್ ಖಾತೆಯಲ್ಲಿ 41 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ ಎನ್ನಲಾಗಿದೆ. ಕೆಲವು ವಿಡಿಯೋಗಳಲ್ಲಿ ಚಿನ್ನಾಭರಣ ಹಾಗೂ ಮನೆಯಲ್ಲಿ ಇಟ್ಟಿದ್ದ ಹಣ ಕಾಣಿಸಿಕೊಂಡಿದ್ದು, ಆಭರಣ ಖರೀದಿಸಿದ ಅಂಗಡಿಗಳ ಮಾಹಿತಿಯನ್ನೂ ಹಂಚಿಕೊಂಡಿದ್ದರು ಎನ್ನಲಾಗಿದೆ.(ಏಜೆನ್ಸೀಸ್​)