ಹಾಪುರ್ (ಉತ್ತರ ಪ್ರದೇಶ): ಕೋವಿಡ್ 19 ನಿಯಂತ್ರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸದವರಿಂದ 1 ಸಾವಿರ ರೂ.ವರೆಗೂ ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ. ಹೀಗಿದ್ದರೂ ಉತ್ತರ ಪ್ರದೇಶ ಪೊಲೀಸರು ಮಾತ್ರ ಮಾಸ್ಕ್ ಧರಿಸದೇ ಇರುವುದಕ್ಕೆ ವಿಭಿನ್ನವಾದ ಶಿಕ್ಷೆ ನೀಡಿ ಕುಖ್ಯಾತರಾಗಿದ್ದಾರೆ!
ಉತ್ತರ ಪ್ರದೇಶದಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಬಿಸಿಲು ಸುಡುತ್ತಿತ್ತು. ಈ ಸಂದರ್ಭದಲ್ಲಿ ರೈಲ್ವೆ ಕ್ರಾಸಿಂಗ್ನ ಗೇಟ್ ಹಾಕಿದ್ದರಿಂದ, ಇಬ್ಬರು ಯುವಕರು ಅಲ್ಲಿ ನಿಂತಿದ್ದರು. ಆದರೆ ಅವರು ಮಾಸ್ಕ್ ಧರಿಸಿರಲಿಲ್ಲ. ರೈಲ್ವೆ ಕ್ರಾಸಿಂಗ್ನಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಇದನ್ನು ಗಮನಿಸಿ, ಯುವಕರನ್ನು ತಮ್ಮ ಬಳಿ ಕರೆದರು.
ಬಳಿಕ ಮಾಸ್ಕ್ ಧರಿಸದೇ ಇರುವುದಕ್ಕಾಗಿ, ರೈಲ್ವೆ ಹಳಿಯ ಸಮೀಪದಲ್ಲೇ ಉರುಳು ಸೇವೆ ಮಾಡಲು ಹೇಳಿದರು. ಸರಿಯಾಗಿ ಉರುಳು ಸೇವೆ ಮಾಡುತ್ತಿಲ್ಲ ಎಂದು ಒಬ್ಬನ ಮೇಲೆ ಬೆತ್ತ ಪ್ರಹಾರ ಮಾಡಿದ್ದಲ್ಲದೆ, ಅತ್ತಿಂದಿತ್ತ, ಇತ್ತಿಂದತ್ತ ಐದಾರು ಬಾರಿ ಉರುಳು ಸೇವೆ ಮಾಡಿಸಿದರು.
ರೈಲ್ವೆ ಕ್ರಾಸಿಂಗ್ನಲ್ಲಿ ಗೇಟ್ ತೆರೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಉತ್ತರ ಪ್ರದೇಶ ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಒಬ್ಬ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಹೋಂಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.