ನ್ಯೂಸ್

ಯುವಜನರನ್ನು ಬಲಿ ಪಡೆಯುತ್ತಿರುವ ಕಿಲ್ಲರ್ ಆನ್​ಲೈನ್ ಜೂಜು!

| ಯಂಕಣ್ಣ ಸಾಗರ್ ಬೆಂಗಳೂರು

ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ಡ್ರಗ್ಸ್​ಗಳ ವ್ಯಸನದ ವಿರುದ್ಧ ಸರ್ಕಾರಗಳು ಸಮರ ಸಾರುತ್ತಿರುವ ಬೆನ್ನಲ್ಲೇ, ಆನ್​ಲೈನ್ ಗೇಮ್ಳೆಂಬ ಹೊಸ ಅವತಾರದಲ್ಲಿ ವಯಸ್ಸಿನ ಹಂಗಿಲ್ಲದೆ ಜನರು ಜೂಜಾಟದ ದಾಸರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಣ, ಆಸ್ತಿ ಕಳೆದುಕೊಂಡು ತಮ್ಮ ಜತೆಗೆ ಕುಟುಂಬವನ್ನೂ ಬೀದಿಗೆ ತರುತ್ತಾರೆಂಬ ಕಾರಣಕ್ಕೆ ರಾಜ್ಯದಲ್ಲಿ ನಿಷೇಧಗೊಳಿಸಲಾಗಿದ್ದ ಲಾಟರಿ ಮೋಜು ಇದೀಗ ಆನ್​ಲೈನ್ ಗೇಮ್ ಹೆಸರಿನಲ್ಲಿ ರೂಪಾಂತರಗೊಂಡು ಜನರನ್ನು ಆಕರ್ಷಿಸುತ್ತಿದೆ. ಬರೀ 25 ಅಥವಾ 50 ರೂ. ಬಂಡವಾಳ ಹಾಕಿ ಕೋಟಿ ಕೋಟಿ ರೂ. ಗೆಲ್ಲಬಹುದೆಂಬ ಆಮಿಷವೊಡ್ಡಿ ಯುವಕರ ದಾರಿ ತಪ್ಪಿಸುವಂತಹ ನೂರಾರು ಆನ್​ಲೈನ್ ಗೇಮ್ ಆಪ್​ಗಳು ಸ್ಕಿಲ್ ಗೇಮ್ (ಕೌಶಲ್ಯ ಆಟ) ಹೆಸರಲ್ಲಿ ಜೂಜಾಡಿಸಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತರುತ್ತಿವೆ.

ಶೇ. 200 ಹೊಸ ಗ್ರಾಹಕರು: ಭಾರತದಾದ್ಯಂತ ಆನ್​ಲೈನ್ ಗೇಮಿಂಗ್ ವ್ಯವಹಾರ ವಾರ್ಷಿಕ 20,000 ಕೋಟಿ ರೂ. ದಾಟಿದೆ. ಕರೊನಾ ಲಾಕ್​ಡೌನ್ ಅವಧಿಯಲ್ಲಿ ಶೇ. 200 ಹೊಸ ಗ್ರಾಹಕರು ಈ ಜೂಜಾಟದ ಬಲೆಗೆ ಬಿದ್ದಿದ್ದಾರೆಂದು ಆನ್​ಲೈನ್ ಗೇಮಿಂಗ್ ಸಂಸ್ಥೆಯೇ ಹೇಳಿಕೊಂಡಿದೆ. ಕ್ರಿಕೆಟ್ ಮತ್ತು ಜೂಜು ಪ್ರೇಮಿಗಳನ್ನೇ ಹೆಚ್ಚು ಗುರಿಯಾಗಿಸಿಕೊಂಡು ಆನ್​ಲೈನ್ ಆಪ್​ಗಳನ್ನು ರೂಪಿಸಲಾಗುತ್ತಿದೆ. ಇಂದಲ್ಲ, ನಾಳೆ 1 ಕೋಟಿ ರೂ. ಗೆಲ್ಲಬಹುದೆಂಬ ಆಸೆಯಿಂದ ಹಣ ಹಾಕಿ ಕಳೆದುಕೊಳ್ಳುತ್ತಿರುವ ಯುವಕರಿಗೆ ಆನ್​ಲೈನ್ ಆಟ ವ್ಯಸನವಾಗಿ ಅಂಟಿಕೊಳ್ಳುತ್ತಿದೆ.

ಆತ್ಮಹತ್ಯೆ ಸರಣಿ: ಇತ್ತೀಚೆಗೆ ಆನ್​ಲೈನ್ ಗೇಮ್ಲ್ಲಿ ಹಣ ಕಳೆದುಕೊಂಡ 20 ವರ್ಷದ ಚೆನ್ನೈ ಯುವಕನೊಬ್ಬ ಮಾನಸಿಕ ಆಘಾತಕ್ಕೆ ಒಳಗಾಗಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಯುವಕರ ಜೀವ ತೆಗೆದು ಕುಟುಂಬವನ್ನು ಬೀದಿಗೆ ತಳ್ಳುವ ಈ ಆಪ್​ಗಳ ನಿಯಂತ್ರಣಕ್ಕೆ ಕಾನೂನಿನ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠ ಕೂಡ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ.

ಜೂಜಾಟ ಹೇಗೆ?

ಇಸ್ಪೀಟ್​ನ ಆನ್​ಲೈನ್ ಗೇಮ್ ಆಗಿದ್ದರೆ ಆಪ್ ಡೌನ್​ಲೋಡ್ ಮಾಡಿಕೊಂಡ ಬಳಿಕ ನೋಂದಣಿಯಾಗಬೇಕು. ಇದಾದ ಕೂಡಲೇ ಆನ್​ಲೈನ್ ಬ್ಯಾಂಕಿಂಗ್ ಲಿಂಕ್ ಕೇಳುತ್ತದೆ. ಕನಿಷ್ಠ 100 ರೂ.ನಿಂದ 1000 ರೂ.ವರೆಗೆ ಹಣ ಪಾವತಿಸಿಕೊಂಡು, ಪಾಯಿಂಟ್ಸ್ ಕೊಡಲಾಗುತ್ತದೆ. ಆಟದಲ್ಲಿ ಗೆದ್ದಂತೆ ಇಂತಿಷ್ಟು ಪಾಯಿಂಟ್ಸ್ ಕೊಡಲಾಗುತ್ತದೆ. ಗೆದ್ದ ಹಣವನ್ನು ಪುನಃ ಗ್ರಾಹಕನ ಖಾತೆಗೆ ಹಾಕಬೇಕಾದರೆ ಶೇ.5ರಂತೆ ಕಮಿಷನ್ ಕಡಿತ ಮಾಡಿಕೊಳ್ಳಲಾಗುತ್ತದೆ.

ಕ್ರಿಕೆಟ್ ಗೇಮ್ ಆಗಿದ್ದರೆ ಪಂದ್ಯಕ್ಕೆ 15, 29, 49 ರೂ. ಪಾವತಿಸಿಕೊಳ್ಳುತ್ತಾರೆ. ಪಂದ್ಯ ನಡೆಯುವ ನಾಲ್ಕೈದು ಗಂಟೆ ಮೊದಲು ಆಪ್​ನಲ್ಲಿ ಮಾಹಿತಿ ನೀಡಲಾಗುತ್ತದೆ. ಆಗ 49 ರೂ. ಪಾವತಿಸಿ, ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡ ರಚಿಸಿಕೊಳ್ಳಬೇಕು. ಕ್ರಿಕೆಟ್ ಶುರುವಾದ ಬಳಿಕ ನಾವು ಆಯ್ಕೆ ಮಾಡಿಕೊಂಡಿರುವ ಆಟಗಾರರು ಪಂದ್ಯದಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸಲಾಗುತ್ತದೆ. ಪಂದ್ಯದಲ್ಲಿ ಇಲ್ಲದ ಆಟಗಾರರನ್ನು ನಾವು ಆಯ್ಕೆ ಮಾಡಿದ್ದರೆ, ಅರ್ಧ ಗಂಟೆಯೊಳಗೆ ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ. ಆಯ್ಕೆ ಮಾಡಿದ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿ ಗೆದ್ದರೆ 1 ಕೋಟಿ ರೂ, 10 ಲಕ್ಷ ರೂ., 5 ಲಕ್ಷ ರೂ. ಹಾಗೂ ಕನಿಷ್ಠ 50 ಲಕ್ಷ ರೂ. ವರೆಗೂ ಬಹುಮಾನ ನೀಡುವ ಆಮಿಷವೊಡ್ಡುತ್ತಾರೆ.

ವೈದ್ಯರ ಎಚ್ಚರಿಕೆ ಏನು?

ಆನ್​ಲೈನ್ ಗೇಮ್ ಚಟ ಅಂಟಿಸಿಕೊಂಡವರು ಕುಟುಂಬ ಸದಸ್ಯರ ಜತೆ ಸದಾ ಜಗಳ ಮಾಡುತ್ತಾರೆ. ಆರೋಗ್ಯ, ನಿದ್ರೆಯ ಬಗ್ಗೆ ಗಮನ ಕೊಡುವುದಿಲ್ಲ. ಅತಿಯಾದ ಆಸಕ್ತಿ ಬೆಳೆಸಿಕೊಂಡವರಿಗೆ ಆಟ ಆಡದಂತೆ ತಡೆದರೆ, ಮೊಬೈಲ್ ಅಥವಾ ಕಂಪ್ಯೂಟರ್ ಕಸಿದುಕೊಂಡರೆ, ಹಣ ಕೊಡದಿದ್ದರೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ. ಆತ್ಮಹತ್ಯೆ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಮನೆ, ಆಸ್ತಿ ಮಾರಾಟ ಮಾಡಿಯಾದರು ಆಟವಾಡಬೇಕೆಂಬ ಸ್ಥಿತಿಗೆ ತಲುಪಿರುತ್ತಾರೆ ಎನ್ನುತ್ತಾರೆ ಅಭಯ ಆಸ್ಪತ್ರೆಯ ಹಿರಿಯ ಮನೋವೈದ್ಯರಾದ ಡಾ.ಎ. ಜಗದೀಶ್.

ಅಮಾಯಕರಿಂದ ಪ್ರಚಾರ

ಕೃಷಿಕರು, ವಿದ್ಯಾವಂತ ನಿರುದ್ಯೋಗಿಗಳು, ಸಣ್ಣಪುಟ್ಟ ವ್ಯಾಪಾರಿಗಳ ಹೆಸರಿನಲ್ಲಿ ಜಾಹೀರಾತು ವಿಡಿಯೋ ಮಾಡಿ ಪ್ರಕಟಿಸಲಾಗುತ್ತಿದೆ. ‘ಈ ಆಟದಿಂದ ಕೋಟ್ಯಂತರ ರೂ. ಗೆದ್ದು ಐಷಾರಾಮಿ ಜೀವನ ನಡೆಸುತ್ತಿದ್ದೇವೆ. ನೀವೂ ಕೂಡ ಆಪ್ ಡೌನ್​ಲೋಡ್ ಮಾಡಿಕೊಂಡು ಹಣ ಗೆಲ್ಲುವಂತೆ’ ಜನರಿಗೆ ಪ್ರಚೋದಿಸಲಾಗುತ್ತಿದೆ. ಗೆದ್ದ ಹಣದಲ್ಲೇ ಮನೆ ಕಟ್ಟಿಸುತ್ತಿದ್ದೇನೆ, ಕಾರು ಖರೀದಿಸಿದ್ದೇನೆ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಿದ್ದೇನೆ ಎಂದು ಹೇಳಿಸಲಾಗುತ್ತಿದೆ. ಆನ್​ಲೈನ್ ಗೇಮ್ ಕಂಪನಿಗಳು ಈ ರೀತಿಯಾಗಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

ತೆಲಂಗಾಣದಲ್ಲಿ ನಿಷೇಧ

ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಆನ್​ಲೈನ್ ಗ್ಯಾಂಬ್ಲಿಂಗ್​ನಲ್ಲಿ ಹಣ ಕಳೆದುಕೊಂಡ ಹಲವರು ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆ ಇದೆ. ಹೀಗಾಗಿಯೇ ತೆಲಂಗಾಣ ಸರ್ಕಾರ, ಜೂಜಾಟದ ಆಪ್​ಗಳನ್ನು ನಿಷೇಧಿಸಿದೆ. ಇದೇ ಮಾದರಿಯಲ್ಲಿ ಆಂಧ್ರ ಸರ್ಕಾರವೂ ಹೆಜ್ಜೆ ಇಟ್ಟಿದೆ.

ಗೇಮ್ಲ್ಲಿ ಆಫ್ ಸ್ಕಿಲ್ ಹಾಗೂ ಗೇಮ್ ಆಫ್ ಚಾನ್ಸ್ ಎಂಬ ಎರಡು ವಿಧಗಳಿವೆ. ಗೇಮ್ ಆಫ್ ಚಾನ್ಸ್​ಗೆ ಯಾವುದೇ ರೀತಿ ಅನುಮತಿ ಇಲ್ಲ. ಗೇಮ್ ಆಫ್ ಸ್ಕಿಲ್​ಗೆ ಸೂಕ್ತ ಪರವಾನಗಿ ಪಡೆಯಬೇಕು. ಈ ಆಟಗಳಿಗೆ ಸ್ನೇಹಯುತವಾಗಿ ಆಡುವುದಕ್ಕೆ ಮಾತ್ರ ಅವಕಾಶವಿದೆ. ವಾಣಿಜ್ಯ ಉದ್ದೇಶದಿಂದ ಜಾಹೀರಾತು ಮೂಲಕ ಪ್ರಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆಪ್ ಆಧಾರಿತ ಆನ್​ಲೈನ್ ಗೇಮ್ಳಲ್ಲಿ ಹಣ ಕಟ್ಟಿಸಿಕೊಳ್ಳುವುದೂ ಕಾನೂನಿಗೆ ವಿರುದ್ಧ.| ಎಂ.ಎಸ್.ಶ್ಯಾಮಸುಂದರ್, ಹೈಕೋರ್ಟ್ ವಕೀಲರು

ಪ್ಲೇ ಸ್ಟೋರ್​ನಲ್ಲಿ ಸಿಗಲ್ಲ

ರಮ್ಮಿ ಸರ್ಕಲ್, ಡ್ರೀಮ್ 11, ಎಂ11 ಸರ್ಕಲ್, ಗೇಮ್, ಮಿಲಿಯನ್ ಫೇಸ್ಟ್, ಬ್ಲಿಟ್ಜ್ ಪ್ರೀಮಿಯರ್ ಲೀಗ್, ಪೋಕರಿಬಾಜಿ, ರಮ್ಮಿ ಬಾಜಿ, ರಮ್ಮಿ ಗುರು, ಜಂಗ್ಲಿ ರಮ್ಮಿ, ವಿನ್ ರಮ್ಮಿ, ರಮ್ಮಿ ಕಲ್ಚರ್, ಮೈಟೀಮ್ 11 ಸರ್ಕಲ್, ಹವ್​ಜಾತ್, ಫ್ಯಾನ್​ಫೈಟ್, ಪೇಟಿಎಂ ಫಸ್ಟ್ ಗೇಮ್್ಸ ಸೇರಿದಂತೆ ಇನ್ನಿತರ ಹೆಸರುಗಳ 100ಕ್ಕೂ ಹೆಚ್ಚು ಆನ್​ಲೈನ್ ಗೇಮ್ಳಿವೆ. ಬಹುತೇಕ ಈ ಆಪ್​ಗಳು ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯವಿಲ್ಲ. ಗೂಗಲ್​ನಲ್ಲಿ ಹುಡುಕಾಡಿ ನೇರವಾಗಿ ಡೌನ್​ಲೋಡ್ ಮಾಡಿಕೊಳ್ಳಬೇಕಿದೆ. ಈ ಆಪ್​ಗಳ ಲಿಂಕ್​ಗಳನ್ನು ಯೂ ಟ್ಯೂಬ್, ಫೇಸ್​ಬುಕ್, ಟೆಲಿಗ್ರಾಂನಲ್ಲಿ ಹರಿಬಿಡಲಾಗುತ್ತಿದೆ. ಬಳಕೆದಾರರನ್ನು ಹೆಚ್ಚಿಸಲು ಲಿಂಕ್​ಗಳನ್ನು ಹಂಚಿಕೊಳ್ಳುವ ಮೂಲಕ ಆಪ್​ಗಳನ್ನು ಡೌನ್​ಲೋಡ್ ಮಾಡಿಸಿದವರಿಗೆ 100 ರೂ. ಕ್ಯಾಶ್​ಬ್ಯಾಕ್ ನೀಡುವ ತಂತ್ರವನ್ನೂ ಕಂಪನಿಗಳು ಅನುಸರಿಸುತ್ತಿವೆ.

ಇ-ಮಾರ್ಕೆಟಿಂಗ್: ಜನಪ್ರಿಯ ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು, ಸೆಲೆಬ್ರಿಟಿಗಳನ್ನು ರಾಯಭಾರಿಗಳನ್ನಾಗಿಸಿಕೊಂಡು ‘ಮೋಜಿನೊಂದಿಗೆ ನಗದು ಗೆಲ್ಲಿ’ ಎಂದು ಜೂಜಾಟಕ್ಕೆ ಆಹ್ವಾನಿಸಲಾಗುತ್ತಿದೆ. ಅತಿಹೆಚ್ಚು ಮಾರ್ಕೆಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಕಳೆದ ವರ್ಷ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಬೆರಳೆಣಿಕೆಯಷ್ಟಿದ್ದ ಆನ್​ಲೈನ್ ಗೇಮ್ಳ ಸಂಖ್ಯೆ ಈ ವರ್ಷದ ಐಪಿಎಲ್ ವೇಳೆಗೆ ನೂರನ್ನು ದಾಟಿದೆ.

ನಿಷೇಧಕ್ಕೆ ಅಭಿಯಾನ: ದೇಶಾದ್ಯಂತ ಆನ್​ಲೈನ್ ಗೇಮ್ಳನ್ನು ನಿಷೇಧಿಸಬೇಕೆಂಬ ಕೂಗೆದ್ದಿದೆ. ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ ಸೇರಿದಂತೆ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ‘ಬ್ಯಾನ್ ಆನ್​ಲೈನ್ ಗ್ಯಾಂಬ್ಲಿಂಗ್’ ಅಭಿಯಾನ ಶುರುವಾಗಿದೆ.

ಆನ್​ಲೈನ್ ಗೇಮಿಂಗ್ ಒಂದು ಮಾನಸಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಹೀಗಿ ರುವಾಗ ಸೆಲೆಬ್ರಿಟಿಗಳೇ ಜಾಹೀರಾತು ಕೊಟ್ಟು ಗ್ಯಾಂಬ್ಲಿಂಗ್​ನಲ್ಲಿ ಪಾಲ್ಗೊಳ್ಳಲು ಪ್ರೇರೆಪಿ ಸುವುದು ಆರೋಗ್ಯಕರ ಬೆಳವಣಿಗೆಯಲ್ಲ.| ಡಾ.ಎ.ಜಗದೀಶ್, ಮನೋವೈದ್ಯರು, ಅಭಯ ಆಸ್ಪತ್ರೆ