ನ್ಯೂಸ್

ವಿರೋಧಿಗೆ ಆಶ್ರಯ ನೀಡಿದಕ್ಕೆ ಯುವಕನ ಮೇಲೆ ಹಲ್ಲೆ

ಮಂಜುನಾಥ.ಕೆ

ಬೆಂಗಳೂರು: ವಿರೋಧಿ ಗ್ಯಾಂಗ್‌ನ ವ್ಯಕ್ತಿಗೆ ಆಶ್ರಯ ನೀಡಿದ ಎಂಬ ಕಾರಣಕ್ಕೆ ಮನೆ ನುಗ್ಗಿ ಯುವಕನ ಮೇಲೆ ಹಲ್ಲೆ ಮಾಡಿದ್ದ ರೌಡಿಯೊಬ್ಬನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರದ ರೌಡಿ ನವೀನ್ (೨೮) ಬಂಧಿತ. ಆರೋಪಿಯು ಆ.೧೭ರಂದು ಕನಕನಪಾಳ್ಯದ ರಾಜೇಶ್ ಎಂಬುವವರ ಮನೆಗೆ ತನ್ನ ಸಹಚರರೊಂದಿಗೆ ನುಗ್ಗಿ ಗಲಾಟೆ ಮಾಡಿದ್ದ. ತನ್ನ ಶತ್ರು ವರುಣ್ ಅಲಿಯಾಸ್ ಮುಕ್ರಿಗೆ ಆಶ್ರಯ ನೀಡುವೆಯಾ ಎಂದು ರಾಜೇಶ್‌ಗೆ ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ರಾಜೇಶ್ ತಪ್ಪಿಸಿಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಗೊಳಗಾದ ರಾಜೇಶ್ ಕನಕನಪಾಳ್ಯದಲ್ಲಿ ಎಗ್‌ರೈಸ್ ಅಂಗಡಿ ನಡೆಸುತ್ತಿದ್ದಾರೆ. ರೌಡಿ ನವೀನ್ ಹಾಗೂ ಆತನ ಸಹಚರರು ತಮ್ಮ ವಿರೋಧಿ ವರುಣ್ ಮೇಲೆ ಹಲ್ಲೆ ಮಾಡಲು ಹುಡುಕಾಟ ನಡೆಸುತ್ತಿದ್ದರು. ಈ ವಿಚಾರ ತಿಳಿದು ವರುಣ್, ಎಗ್‌ರೈಸ್ ಅಂಗಡಿ ಮಾಲೀಕ ರಾಜೇಶ್ ರೂಮ್‌ನಲ್ಲಿ ಆಶ್ರಯ ಪಡೆದಿದ್ದ. ಇದು ರೌಡಿ ನವೀನ್‌ಗೆ ಗೊತ್ತಾಗಿ ತನ್ನ ಸಹಚರರೊಂದಿಗೆ ರಾಜೇಶ್ ಮನೆಗೆ ನುಗ್ಗಿ ರಾಜೇಶ್ ಮೇಲೆ ಹಲ್ಲೆ ಮಾಡಿದ್ದರು ಎಂದು ತಿಳಿದು ಬಂದಿದೆ.