ನ್ಯೂಸ್

ತೃಣಮೂಲ ಕಾಂಗ್ರೆಸ್ ಶಾಸಕ ಜ್ಯೋತಿಪ್ರಿಯ ಮಲ್ಲಿಕ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ ಯುವಕ; ಬಂಧನ| Jyotipriya Mallick

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಾಲ್ಟ್​ ಲೇಕ್​ ಪ್ರದೇಶದಲ್ಲಿರುವ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಜ್ಯೋತಿಪ್ರಿಯ ಮಲ್ಲಿಕ್(Jyotipriya Mallick) ಅವರ ನಿವಾಸಕ್ಕೆ ಭಾನುವಾರ(ನ. 02) ರಾತ್ರಿ ಯುವಕನೊಬ್ಬ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಆರೋಪಿ ಯುವಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಯನ್ನು 30 ವರ್ಷದ ಅಭಿಷೇಕ್ ದಾಸ್ ಎಂದು ಗುರುತಿಸಲಾಗಿದೆ. ಶಾಸಕ ಮಲ್ಲಿಕ್ ಪ್ರತಿನಿಧಿಸುವ ಹಬ್ರಾ ಕ್ಷೇತ್ರದವನು ಎನ್ನಲಾಗಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮಾಡಿಸಿಕೊಳ್ಳುವ ನೆಪದಲ್ಲಿ ಮನೆಗೆ ನುಗ್ಗಿರುವ ಆರೋಪಿ, ಇದಕ್ಕಿದ್ದಂತೆ ಶಾಸಕರ ಮೇಲೆ ದಾಳಿ ಮಾಡಿ ಹೊಟ್ಟೆಯ ಭಾಗಕ್ಕೆ ಗುದ್ದಿದ್ದಾನೆ ಎನ್ನಲಾಗಿದೆ. ಇದರಿಂದ ಶಾಸಕ ಜ್ಯೋತಿಪ್ರಿಯ ಮಲ್ಲಿಕ್ ದಿಗ್ಭ್ರಮೆಗೊಂಡು ಕೂಗಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಘಟನೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಮಲ್ಲಿಕ್, ಆ ಯುವಕ ಇತರೆ ಜನರಂತೆ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳೊದಕ್ಕೆ ಭೇಟಿಯಾಗಲು ಬಯಸುತ್ತಿದ್ದಾನೆಂದು ಭಾವಿಸಿದ್ದೆ, ಆದರೆ ಅವನು ಇದ್ದಕ್ಕಿದ್ದಂತೆ ಮುಂದಕ್ಕೆ ಹಾರಿ ನನ್ನ ಮೇಲೆ ಹಲ್ಲೆ ಮಾಡಿದಾಗ ಆಶ್ಚರ್ಯವಾಯಿತು. ಅವನು ಕುಡಿದ ಮತ್ತಿನಲ್ಲಿದ್ದನೋ ಇಲ್ಲವೋ ನನಗೆ ಖಚಿತವಿಲ್ಲ. ನಾನು ಅವನನ್ನು ಇದುವರೆಗೆ ನೋಡಿರಲಿಲ್. ಹಬ್ರಾದ ಯಾರಾದರೂ ನನ್ನ ಮೇಲೆ ಹಲ್ಲೆ ಮಾಡುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಘಟನೆ ಬಗ್ಗೆ ವಿಚಾರಣೆ ನಡೆಸಿದ್ದು, ಆರೋಪಿ ತಾನೂ ಉತ್ತರ ಪರಗಣ ಜಿಲ್ಲೆ ಹಬ್ರಾ ಪ್ರದೇಶ ನಿವಾಸಿ ಎಂದು ಹೇಳಿಕೊಂಡಿದ್ದಾನೆ ಕೆಲಸಕ್ಕಾಗಿ ಮಲ್ಲಿಕ್ ಜೊತೆ ಮಾತನಾಡಲು ಬಯಸಿದ್ದೆ ಎಂದು ಹೇಳಿದ್ದಾನೆ. ಯುವಕ ಈ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)