ಅಹಮದಾಬಾದ್: ಇತ್ತೀಚಿನ ವರ್ಷದಲ್ಲಿ ಹೃದಯ ಸಂಬಂಧಿ (Heart Related) ಕಾಯಿಲೆಗಳಿಗೆ ಯುವ ಪೀಳಿಗೆ ಹೆಚ್ಚು ಬಲಿಯಾಗುತ್ತಿದ್ದು, ಈ ಆಘಾತಕಾರಿ ವಿಚಾರ ಪೋಷಕರನ್ನು ಚಿಂತೆಗೆ ದೂಡಿದೆ. ಇದೀಗ ಗುಜರಾತ್ ಪೊಲೀಸ್ ನೇಮಕಾರಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೋರ್ವ ಜಾಗಿಂಗ್ ಮಾಡುವಾಗ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್ನ ಜಾಮ್‌ನಗರದ ಲಾಲ್‌ಪುರ ತಾಲ್ಲೂಕಿನ ಭರುಡಿಯಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹೇಮಂತ್ ಭಾಯ್ ಜೋಗಲ್ ಎಂದು ಗುರುತಿಸಲಾಗಿದ್ದು, ಯುವಕ ಹೃದಯಾಘಾತದಿಂದ ಕುಸಿದು ಬೀಳುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿ ಒಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಯುವಕ ಹೇಮಂತ್ ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಗ್ರಾಮದ ಫೀಲ್ಡ್ನಲ್ಲಿ ಜಾಗಿಂಗ್ ಮಾಡುತ್ತಿರುತ್ತಾನೆ. ಎರಡು ಸುತ್ತು ಚೆನ್ನಾಗಿ ಓಡುವ ಯುವಕ ಬಳಿಕ ಸುಸ್ತಾದಂತೆ ಕಾಣುತ್ತಿದ್ದು, ಏಕಾಏಕಿ ಕುಸಿದು ಬೀಳುತ್ತಾನೆ. ಇದನ್ನು ನೋಡಿದ ಸ್ನೇಹಿತರು ಕೂಡಲೇ ಆತನ ರಕ್ಷಣೆಗೆ ಧಾವಿಸುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಯುವಕನ ಸಾವಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.