ನ್ಯೂಸ್

ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿವಿಶ್ವ ಯುವ ಕೌಶಲ ದಿನಾಚರಣೆ

ಎ. ಆರ್. ರಘುರಾಮ

ಚಾಮರಾಜನಗರ : ವಿದ್ಯಾರ್ಥಿಗಳು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಗಮನಹರಿಸಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ತಿಳಿಸಿದರು.

ನಗರದ ವಿಶುವೆಲ್ ಸ್ಟಾೆಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರಿಯಾ ಸಚಿವಾಲಯ, ಮೇರ ಯುವ ಭಾರತ್, ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಯುವ ಕೌಶಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರಸಭೆ ಸಮುದಾಯ ಅಧಿಕಾರಿ ವೆಂಕಟ್‌ನಾಯಕ್ ಮಾತನಾಡಿ, ನಗರಸಭೆ ವತಿಯಿಂದ ಯುವಕ, ಯುವತಿಯರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಚೆಲ್ಲಲು ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಲಾಗಿದೆ. ಕಂಪ್ಯೂಟರ್ ಟ್ರೈನಿಂಗ್, ಹೊಲಿಗೆ ಯಂತ್ರ, ಬ್ಯೂಟಿ ಪಾರ್ಲರ್ ಕೋರ್ಸ್ ವಿಶೇಷವಾಗಿ ಶ್ರೀಶಕ್ತಿ ಸಂಘದವರ ಕೌಶಲ ಅಭಿವೃದ್ಧಿಗೆ ರೂಪಿಸಲಾಗಿದೆ. ಮಹಿಳಾ ಸಂಘಟನೆಗಳು ಇದನ್ನು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹುಮಾನ ವಿತರಣೆ: ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಅಧ್ಯಕ್ಷ ಜಿ.ಬಂಗಾರು ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, 18 ವರ್ಷದ ವಿದ್ಯಾರ್ಥಿಗಳು ಜಿಲ್ಲಾ ಆಡಳಿತ ಭವನ ಎರಡನೇ ಮಹಡಿಯಲ್ಲಿ ಭಾರತ ಸರ್ಕಾರದ ಮೇರಾ ಯುವ ಭಾರತ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯಗಳು ಪಡೆದು ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ನಮ್ಮ ಸಂಸ್ಥೆ ವತಿಯಿಂದ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಮಾತನಾಡಿ, ಇಂದಿನ ಯುವಕರು ಯುವತಿಯರು, ರಸ್ತೆ ಬದಿಯಲ್ಲಿ ಮಾರುವ ತಿಂಡಿಗಳನ್ನು ತಿನ್ನಬಾರದು. ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷ ಲಕ್ಷ್ಮೀ ಶಿವಕುಮಾರ್ ಮಾತನಾಡಿ, ಭಾರತ ದೇಶದ ನರೇಂದ್ರ ಮೋದಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಕಲ್ಪಿಸಿದ್ದಾರೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕಲಿಸಿ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು. ತರಬೇತಿ ಕೇಂದ್ರದ ಮುಖ್ಯ ಶಿಕ್ಷಕಿ ಸುಧಾರಾಣಿ, ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜು, ಸಹನಾ, ಸಂತೋಷ್, ವೀಣಾ, ಎಂ.ಲತಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.