ನ್ಯೂಸ್

ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಗ್ರಾಹಕನ ವಿರುದ್ಧ ತಿರುಗಿಬಿದ್ದ ಮಹಿಳಾ ಸಿಬ್ಬಂದಿ! ವಿಡಿಯೋ ವೈರಲ್​

ನವದೆಹಲಿ: ಪಾಶ್ಚಿಮಾತ್ಯ ದೇಶಗಳಲ್ಲಿ ಯುವತಿಯರು ಬಾರ್​ ಮತ್ತು ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಬಂದ ಗ್ರಾಹಕರನ್ನು ಬಾರ್​ ಸಿಬ್ಬಂದಿ ತುಂಬಾ ಆತ್ಮೀಯವಾಗಿ ನೋಡಿಕೊಳ್ಳಬೇಕಿರುವುದು ಅವರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಕೆಲವರು ಸಲುಗೆಯಿಂದ ಇರುತ್ತಾರೆ. ಆದರೆ, ಅದನ್ನೇ ದುರ್ಬಳಕೆ ಮಾಡಿಕೊಳ್ಳುವ ಕೆಲವರು ಅವರೊಂದಿಗೆ ಅನುಚಿತವಾಗಿ ವರ್ತಿಸುವುದು ಕೂಡ ಸಾಮಾನ್ಯವಾಗಿದೆ.

ಅನ್ಯಾಯ ನಡೆದರು ನಮಗ್ಯಾಕೆ ಅಂತಾ ಕೆಲ ಯುವತಿಯರು ಸಹಿಸಿಕೊಂಡರೆ, ಇನ್ನು ಕೆಲ ಯುವತಿಯರು ದಿಟ್ಟತನದಿಂದ ಅನ್ಯಾಯವನ್ನು ಎದುರಿಸುತ್ತಾರೆ. ಇದಕ್ಕೆ ತಾಜಾ ನಿದರ್ಶನ ಎಂಬಂತಿದೆ ಈ ವೈರಲ್​ ವಿಡಿಯೋ. ದುರುದ್ದೇಶದಿಂದ ಖಾಸಗಿ ಅಂಗ ಸ್ಪರ್ಶಿಸಿದ ಗ್ರಾಹಕನಿಗೆ ಬಾರ್​ನ ಮಹಿಳಾ ಸಿಬ್ಬಂದಿ ಖಡಕ್​ ತಿರುಗೇಟು ನೀಡಿದ ದೃಶ್ಯ ವಿಡಿಯೋದಲ್ಲಿ ಇದೆ.

ಓರ್ವ ಗ್ರಾಹಕನನ್ನು ವಿಚಾರಿಸಿ, ಮೆನು ಕಾರ್ಡ್​ಗಳನ್ನು ತೆಗೆದುಕೊಂಡು ಇನ್ನೊಂದು ಟೇಬಲ್​ನಲ್ಲಿರುವ ಗ್ರಾಹಕನ ಮಹಿಳಾ ಸಿಬ್ಬಂದಿ ತೆರಳುತ್ತಾಳೆ. ಈ ವೇಳೆ ರೆಸ್ಟೋರೆಂಟ್​ ಒಳಗೆ ಬರುವ ಗ್ರಾಹಕನೊಬ್ಬ ಮಹಿಳೆಯ ಹಿಂಭಾಗವನ್ನು ಸ್ಪರ್ಶಿಸುವ ಮೂಲಕ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಆತನ ಹಿಂದೆ ಹೋಗಿ ಬಟ್ಟೆ ಹಿಡಿದೆಳೆದು ಕೆಳಗೆ ಬೀಳಿಸಿ, ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇದಿಷ್ಟು ದೃಶ್ಯ ರೆಸ್ಟೋರೆಂಟ್​ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ಇಡೀ ಘಟನೆಯ ವಿಡಿಯೋ ತುಣುಕನ್ನು ಇನ್​ಸ್ಟೆಂಟ್​ ಕರ್ಮ ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೂ 52 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಮಹಿಳಾ ಸಿಬ್ಬಂದಿಯ ದಿಟ್ಟ ತನವನ್ನು ಕಂಡು ನೆಟ್ಟಿಗರು ಆಕೆಯನ್ನು ಮೆಚ್ಚಿಕೊಂಡಿದ್ದಾರೆ. ಅನ್ಯಾಯ ನಡೆದಾಗ ಅದನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ. (ಏಜೆನ್ಸೀಸ್​)