ಸಾಂದರ್ಭಿಕ ಚಿತ್ರ  
ನ್ಯೂಸ್

ವರ್ಷದ ಹಿಂದಷ್ಟೇ ಮದ್ವೆಯಾಗಿದ್ದವ ನೀರಿಗೆ ಬಿದ್ದ ಮೊಬೈಲ್​ಫೋನ್​ ಎತ್ತಿಕೊಳ್ಳಲು ಹೋಗಿ ಪ್ರಾಣ ಕಳ್ಕೊಂಡ!

ರಾಜಸ್ಥಾನ: ನೀರಿನ ಹೊಂಡಕ್ಕೆ ಬಿದ್ದ ಮೊಬೈಲ್​ಫೋನ್​ ಎತ್ತಿಕೊಳ್ಳಲು ನೀರಿಗೆ ಧುಮುಕಿದ ಯುವಕನೊಬ್ಬ, ಅದರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ರಾಜಸ್ಥಾನದ ಜೈಸಲ್ಮೇರ್​ನ ದರ್ಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಯೀದ್ ಎಂಬ 25 ವರ್ಷದ ಯುವಕ ಮೃತಪಟ್ಟವ. ಈತ ನೀರಿನ ಹೊಂಡದ ಬಳಿ ಕೆಲಸಕ್ಕೆಂದು ಹೋಗಿದ್ದ. ಆಗ ಕಿಸೆಯಲ್ಲಿದ್ದ ಮೊಬೈಲ್​ಫೋನ್ ನೀರಿಗೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲೆಂದು ಈತ ನೀರಿಗೆ ಧುಮುಕಿದ್ದಾನೆ. ಆದರೆ ಈತ ಅಲ್ಲಿ ಮುಳುಗಲಾರಂಭಿಸಿದ್ದ.

ಸ್ಥಳೀಯರು ಕೂಡಲೇ ಅವನನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಈತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಬಳಿಕ ದೃಢಪಡಿಸಿದ್ದಾರೆ. ಈತ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಮೊಬೈಲ್​ಫೋನ್​ಗಾಗಿ ಪ್ರಾಣ ಕಳೆದುಕೊಂಡಂತಾಗಿದೆ.