ನ್ಯೂಸ್

80 ಲಕ್ಷ ರೂ. ಲಾಟರಿ ಬಹುಮಾನ ಗೆದ್ದ ಮಾರನೇ ದಿನವೇ ಯುವಕನ ಬದುಕು ದುರಂತ ಅಂತ್ಯ!

ಕೊಚ್ಚಿ: ಲಾಟರಿಯಲ್ಲಿ ಬಹುಮಾನವಾಗಿ 80 ಲಕ್ಷ ರೂ. ಬಂದ ಮಾರನೇ ದಿನವೇ ಯುವಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೇರಳದ ಪಂಗೋಡೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಪಂಗೋಡೆ ಮೂಲದ ಸಜೀವ್​ (35) ಎಂದು ಗುರುತಿಸಲಾಗಿದೆ. ಸ್ನೇಹಿತರ ಜತೆ ಸೇರಿ ಮದ್ಯದ ಪಾರ್ಟಿ ನಡೆಸುತ್ತಿದ್ದಾಗ ಮಣ್ಣಿನ ದಿಬ್ಬದಿಂದ ಬಿದ್ದು ಮೃತಪಟ್ಟಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪೊಲೀಸರ ಪ್ರಕಾರ, ಸಾವಿಗೂ ಹಿಂದಿನ ದಿನ ಸಜೀವ್ 80 ಲಕ್ಷ ರೂಪಾಯಿ ಲಾಟರಿ ಗೆದ್ದಿದ್ದರು. ಮರುದಿನ ಅವರ ಖಾತೆಗೆ ಹಣ ಬಂದಿದೆ. ಇದರ ಬೆನ್ನಲ್ಲೇ ಏಪ್ರಿಲ್​ 1ರಂದು ರಾತ್ರಿ ಪಾಂಗೋಡೆಯ ಚಂತಕ್ಕುನ್ನುನಲ್ಲಿರುವ ತನ್ನ ಸ್ನೇಹಿತನ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತರಿಗಾಗಿ ಮದ್ಯದ ಪಾರ್ಟಿ ಏರ್ಪಡಿಸಿದ್ದ. ಈ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಸಜೀವ್​ನನ್ನು ಆತನ ಸ್ನೇಹಿತ ಸಂತೋಷ್ ಅಲಿಯಾಸ್​ ಮಾಯಾವಿ ಮಣ್ಣಿನ ದಿಬ್ಬದಿಂದ ಕೆಳಗೆ ತಳ್ಳಿದ್ದ ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಜೀವ್​ನನ್ನು ಪಂಗೋಡೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಈ ಸಂಬಂಧ ಪಂಗೋಡೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)