ಶಿವಮೊಗ್ಗ: ಉತ್ತರಪ್ರದೇಶದ ಪ್ರಯಾಗ್‌ರಾಜ್ ಹಾಗೂ ಬಿಹಾರದಲ್ಲಿ ಪರೀಕ್ಷಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಶಿವಪ್ಪನಾಯಕ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
2019ರಲ್ಲಿ ರೈಲ್ವೆ ಇಲಾಖೆ 35 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2019ರ ಜುಲೈನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು 2021ರಲ್ಲಿ ನಡೆಸಲಾಯಿತು. 2022ರಲ್ಲಿ ಫಲಿತಾಂಶ ಬಿಡುಗಡೆಗೊಂಡು 7,05,446 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ಪರೀಕ್ಷೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಲವು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಆದರೆ ಅದನ್ನು ಸಹಿಸದ ಆಯಾ ರಾಜ್ಯ ಸರ್ಕಾರ ಅಭ್ಯರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿ ದೌರ್ಜನ್ಯವೆಸಗಿವೆ ಎಂದು ಕಿಡಿಕಾರಿದರು.
ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಎಚ್.ಎಸ್.ಬಾಲಾಜಿ, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಮುಖಂಡರಾದ ಕೆ.ದೇವೇಂದ್ರಪ್ಪ, ವಿನಯ್ ತಾಂಡ್ಲೆ, ಚಿರಂಜೀವಿ ಬಾಬು, ಮಹಮ್ಮದ್ ನಿಹಾಲ್, ಗಿರೀಶ್ ಇತರರಿದ್ದರು.