ನ್ಯೂಸ್

"ಬೆಹತರ್‌ ಭಾರತ್‌ ಬುನಿಯಾದಿ" ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸುವಂತೆ ಸಿಎಂಗೆ ಆಹ್ವಾನ ನೀಡಿದ ಯುವ ಕಾಂಗ್ರೆಸ್‌ ನಿಯೋಗ!

ಬೆಂಗಳೂರು: ಮುಂದಿನ ತಿಂಗಳು ಮೂರು ದಿನಗಳ “ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶ ಕಾರ್ಯಕ್ರಮ ಉದ್ಘಾಟಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್​​​ ಆಹ್ವಾನ ನೀಡಿದೆ.

ಎಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸ್​​ನ ಉಸ್ತುವಾರಿ ಕೃಷ್ಣ ಅಳವಾರು, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಸದಸ್ಯರಾದ ಎಂ.ಎಸ್.‌ ರಕ್ಷಾ ರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಬೆಹತರ್‌ ಭಾರತ್‌ ಬುನಿಯಾದಿ ಸಮಾವೇಶವನ್ನು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಸಲು ಚಿಂತಿಸಿದ್ದು, ಯುವ ಸಮೂಹದ ಮೂಲಕ ದೇಶದಲ್ಲಿ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅತಿ ದೊಡ್ಡ ಯುವ ಸಮಾವೇಶ ಇದಾಗಿದ್ದು, ಮೂರು ದಿನ ಪಕ್ಷದ ಹಿರಿಯ ಮುಖಂಡರು, ತಜ್ಞರು ವಿವಿಧ ವಿಷಯಗಳ ಬಗ್ಗೆ ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ರಕ್ಷಾ ರಾಮಯ್ಯ ಮಾಹಿತಿ ನೀಡಿದ್ದಾರೆ.