ನ್ಯೂಸ್

ಯುವ ಕಾಂಗ್ರೆಸ್ ಮುಖಂಡರ ಹೊಡೆದಾಟ; ಕ್ಷೇತ್ರ ಪ್ರಧಾನ ಕಾರ್ಯದರ್ಶಿಗೆ ಹಲ್ಲೆ, ನಾಲ್ವರ ವಿರುದ್ಧ ಮೊಕದ್ದಮೆ

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲಪಾಡ್ ಪುಂಡಾಟ ಮುಂದುವರಿದಿದ್ದು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್​ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ.

ಸಾರ್ವಜನಿಕವಾಗಿ ಹಲ್ಲೆ, ಅಸಭ್ಯ ವರ್ತನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಆರೋಪಗಳಡಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಮೊದಲ ಆರೋಪಿ (ಎ1) ಮಹಮ್ಮದ್ ಹ್ಯಾರಿಸ್ ನಲಪಾಡ್, ಎ2 ನಲಪಾಡ್ ಗನ್​ವ್ಯಾನ್, ಎ3 ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್, ಎ4 ಮಂಜು ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಕೇಂದ್ರ ವಿಭಾಗ ಡಿಸಿಪಿ ಡಾ. ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಭಾನುವಾರ (ಮಾ.15) ವೈಯಾಲಿಕಾವಲ್​ನಲ್ಲಿ ತೆಲಗುವಿಜ್ಞಾನ ಸಮಿತಿಯಲ್ಲಿ ಯುವ ಕಾಂಗ್ರೆಸ್​ನಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮತ್ತು ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಮನಗರ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಈ ವೇಳೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಶಾಸಕರ ಪುತ್ರ ಗೌತಮ್ ನನಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ನನಗೆ ಗೌರವ ಕೊಡಲಿಲ್ಲ ಎಂದು ಅಳಲು ತೋಡಿಕೊಂಡರು. ಅದಕ್ಕಾಗಿ ಕಾರ್ಯಕ್ರಮ ಆಯೋಜಕ ಶಿವಕುಮಾರ್ ಬಳಿ ಗೌತಮ್ ವಿಚಾರ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದೆ. ಅದಕ್ಕೆ ಶಿವಕುಮಾರ್ ನನಗೆ ಏರುಧ್ವನಿಯಲ್ಲಿ ಬೈದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಧ್ಯಪ್ರವೇಶಿಸಿದ ನಲಪಾಡ್, ಏಕಾಏಕಿ ನನ್ನ ಭುಜ ಹಾಗೂ ಕಪಾಳಕ್ಕೆ ಹೊಡೆದು ನಿಂದಿಸಿದ. ನಲಪಾಡ್ ಗನ್​ವ್ಯಾನ್ 10 ಬಾರಿ ಕಪಾಳಕ್ಕೆ ಹೊಡೆದು ಕೊಲೆ ಮಾಡಲು ಯತ್ನಿಸಿದ. ಮಂಜು, ಶಿವಕುಮಾರ್ ಹಾಗೂ ಇತರರು ನನ್ನ ಮೇಲೆ ಹಲ್ಲೆ ನಡೆಸಿದರು. 10 ನಿಮಿಷ ಎಳೆದಾಡಿ ಥಳಿಸಿದರು. ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಚಿನ್​ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.

ನಲಪಾಡ್ ದೂರಿನಲ್ಲಿ ಏನಿದೆ ?: ರಾತ್ರಿ 8 ಗಂಟೆಗೆ ಸ್ಪರ್ಧೆಯಲ್ಲಿ ವಿಜೇತ ಐವರಿಗೆ ಆಯ್ಕೆ ಸಮಿತಿ ಬಹುಮಾನ ನೀಡಿತು. ಆ ಬಳಿಕ ಯುವ ಕಾಂಗ್ರೆಸ್ ಉಸ್ತುವಾರಿ ಇಮ್ರಾನ್ ಬಳಿ ಬಂದ ಸಚಿನ್ ಗೌಡ, ಎಂಎಲ್​ಎ ಪುತ್ರ ಗೌತಮ್ನ್ನು ಯಾಕೆ ವೇದಿಕೆ ಮೇಲೆ ಕರೆಯಲಿಲ್ಲ ಎಂದು ಪ್ರಶ್ನಿಸಿದ್ದ. ಇದು ನಮ್ಮ ಪಕ್ಷಕ್ಕೆ ಸೇರಿದ ವಿಚಾರ. ಈ ಬಗ್ಗೆ ಕೇಳುವ ಅಗತ್ಯ ಇರುವುದಿಲ್ಲ ಎಂದು ಇಮ್ರಾನ್ ಉತ್ತರಿಸಿದ್ದ. ಸುಮ್ಮನಾಗದ ಸಚಿನ್ ಗೌಡ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಬಳಿಯೂ ಪ್ರಶ್ನಿಸಿದ್ದ. ಆಗ ಸಚಿನ್ ಮತ್ತು ಶಿವಕುಮಾರ್ ನಡುವೆ ಮಾತಿನ ಚಕಮಕಿ ಶುರುವಾಯಿತು. ಅಷ್ಟೊತ್ತಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾರ್ದಲಿ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾದರು. ಅವರ ಹಿಂದೆಯೇ ನಾನು ಗಲಾಟೆ ಸ್ಥಳಕ್ಕೆ ಹೋಗಿ ಸಚಿನ್​ಗೌಡಗೆ ಬುದ್ಧಿವಾದ ಹೇಳಿದೆ.

ಆಗ ಸಚಿನ್ ಗೌಡ, ನಾನು ನಿನ್ನ ಹತ್ತಿರ ಮಾತನಾಡುತ್ತಿಲ್ಲ ಎಂದು ಏರುದನಿಯಲ್ಲಿ ಹೇಳಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ‘ಇದು ಯೂತ್ ಕಾಂಗ್ರೆಸ್ ಕಾರ್ಯಕ್ರಮ, ನಾನು ಬೆಂಗಳೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ. ಇದು ನನ್ನ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ. ಪ್ರತಿಯಾಗಿ ಸಚಿನ್ ಗೌಡ, ನಾನು ನೋಡಿಕೊಳ್ಳುತ್ತೇನೆ ಎಂದು ಹೊರಗೆ ಹೋದ. ಆದರೆ, ಆತ ಯಾರೆಂದು ಗೊತ್ತಿಲ್ಲ. ನನ್ನ ತೇಜೋವಧೆ ಮಾಡುವ ಉದ್ದೇಶಕ್ಕೆ ಗಲಾಟೆ ಮಾಡಿದ್ದಾನೆ ಎಂದು ನಲಪಾಡ್ ಆರೋಪಿಸಿದ್ದಾರೆ.

ಪುಂಡಾಟಿಕೆ ಮೊದಲಲ್ಲ: 

  •  2020ರ ಫೆ.9ರಂದು ಬೆಂಟ್ಲಿ ಕಾರು ಅಡ್ಡಾದಿಡ್ಡಿ ಚಲಾಯಿಸಿ ಆಟೋ, 2 ಬೈಕ್​ಗೆ ಡಿಕ್ಕಿ ಹೊಡೆದು ಕೊನೆಗೆ ತಾನು ಕಾರು ಚಾಲನೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಸದಾಶಿವನಗರ ಸಂಚಾರ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ.
  •  2018ರ ಫೆ.17ರಂದು ಯುಬಿ ಟವರ್ ಸ್ಕೈ ಬಾರ್​ನಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ನಲಪಾಡ್ ಮತ್ತು ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಬ್ಬನ್ ಪಾರ್ಕ್ ಪೊಲೀಸರು ನಲಪಾಡ್ ಬಂಧಿಸಿದ್ದರು. 116 ದಿನಗಳ ಬಳಿಕ ಹೈಕೋರ್ಟ್​ನಲ್ಲಿ ಜಾಮೀನು ಪಡೆದು ಜೈಲಿಂದ ಹೊರಬಂದಿದ್ದ.

ರೌಡಿಪಟ್ಟಿಗೆ ಸೇರಿಸಲು ಆಗ್ರಹ: ಶಾಸಕನ ಪುತ್ರ ಮಹಮ್ಮದ್ ನಲಪಾಡ್, ಪದೇ ಪದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ರೌಡಿಪಟ್ಟಿಗೆ ಸೇರಿಸಿ ನಿಗಾ ವಹಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ. ಈ ಹಿಂದೆಯೂ ಸಹ ಉದ್ಯಮಿ ಪುತ್ರ ವಿದ್ವತ್ ಕೊಲೆ ಯತ್ನ ಪ್ರಕರಣದಲ್ಲಿಯೂ ರೌಡಿಪಟ್ಟಿ ತೆರೆಯಬೇಕೆಂದು ಒತ್ತಾಯಿಸಲಾಗಿತ್ತು.

ಸಚಿನ್ ನೀಡಿರುವ ದೂರಿನಲ್ಲಿ ಜೀವ ಬೆದರಿಕೆ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ನಲಪಾಡ್ ಸೇರಿ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ. | ಡಾ. ಚೇತನ್​ಸಿಂಗ್ ರಾಥೋಡ್ ಕೇಂದ್ರ ವಿಭಾಗ ಡಿಸಿಪಿ ಬಸವಕಲ್ಯಾಣದ ಶಾಸಕರ ಪುತ್ರನನ್ನು ವೇದಿಕೆಗೆ ಕರೆಯುವಂತೆ ಹೇಳಿದ್ದಕ್ಕೆ ನಲಪಾಡ್, ಇತರರು ಗಲಾಟೆ ಮಾಡಿದ್ದಾರೆ. ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ದೂರು ನೀಡುತ್ತೇನೆ. | ಸಚಿನ್ ಗೌಡ ಗೋವಿಂದರಾಜನಗರ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಗೌತಮ್ ಎಂಬಾತನನ್ನು ಆಹ್ವಾನಿಸದ ಕಾರಣಕ್ಕೆ ಸಚಿನ್ ಗಲಾಟೆ ಮಾಡುತ್ತಿದ್ದ. ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಆತನನ್ನು ಪ್ರಶ್ನಿಸಿದೆ. | ಮಹಮ್ಮದ್ ನಲಪಾಡ್ ಶಾಸಕ ಎಸ್.ಎ. ಹ್ಯಾರಿಸ್ ಪುತ್ರ https://www.vijayavani.net/report-on-students-before-april-30/