ನ್ಯೂಸ್

ಲೇಡಿಸ್​ ಪಿಜಿಯಲ್ಲಿ ಸ್ನಾನದ ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದ ಕಾಮುಕ: ಮೊಬೈಲ್​ನಲ್ಲಿತ್ತು ಶಾಕಿಂಗ್​ ಸಂಗತಿ

ಬೆಂಗಳೂರು: ಪಿಜಿಯಲ್ಲಿ ನೆಲೆಸಿರುವ ಮಹಿಳೆಯರೇ ತುಂಬಾ ಎಚ್ಚರ! ಸ್ನಾನಕ್ಕೆ ಹೋಗುವಾಗ ಒಮ್ಮೆ ಬಾತ್​ರೂಮ್ ಕಿಟಕಿ ಸೇರಿದಂತೆ ಸುತ್ತಮುತ್ತ ಎಲ್ಲವೂ ಸರಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವಿಡಿಯೋಗಳು ರೆಕಾರ್ಡ್ ಆಗಿ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಸ್ನಾನದ ವಿಡಿಯೋ ತೆಗೆಯುತ್ತಿದ್ದ ವಿಕೃತ ಮನಸ್ಸಿನ ಕಾಮುಕನೊಬ್ಬ ರೆಡ್​ಹ್ಯಾಂಡ್​ ಹಾಕಿ ಸಿಕ್ಕಿಬಿದ್ದಿರುವ ಘಟನೆ ಮಹದೇವಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿಂದೆಯೂ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೇಡಿಸ್​ ಪಿಜಿಯಲ್ಲಿ ವಾಸಿಸುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.

ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್

ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಅಶೋಕ್​, ಮಹದೇವಪುರದ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸ ಮಾಡುತ್ತಿದ್ದ. ಅದೇ ಪಿಜಿಯ ಮುಂಭಾಗದಲ್ಲೇ ಲೇಡಿಸ್​ ಪಿಜಿಯು ಇತ್ತು. ಈತ ಲೇಡಿಸ್ ಪಿಜಿ ಸ್ನಾನದ ರೂಮನ್ನೇ ನೋಡುತ್ತಾ ಕುಳಿತಿರುತ್ತಿದ್ದ. ಯುವತಿಯರು ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ.

ವೆಂಟಿಲೇಷನ್ ಮೂಲಕ ರೆಕಾರ್ಡ್​

ಯುವತಿಯರು ಸ್ನಾನ ಮಾಡುವ ವಿಡಿಯೋವನ್ನು ವೆಂಟಿಲೇಷನ್ ಮೂಲಕ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡುತ್ತಿದ್ದಾರೆ. ಇದೇ ರೀತಿ ವಿಡಿಯೋ ಮಾಡುವಾಗ ಆರೋಪಿ ಅಶೋಕ್​ ಜೂನ್​ 21ರಂದು ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

7 ಯುವತಿಯರ ವಿಡಿಯೋ

ಆರೋಪಿ ಅಶೋಕನ ಮೊಬೈಲ್ ಪರಿಶೀಲನೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಆತನ ಮೊಬೈಲ್​ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಮಹದೇವಪುರ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)