ಫುಟ್‌ಪಾತ್‌ನಲ್ಲಿ ಬಂದ ಬೈಕ್ ಸವಾರರಿಗೆ ದಾರಿ ಬಿಡದ ಮೂವರು ಯುವತಿಯರು 
ನ್ಯೂಸ್

ಫುಟ್‌ಪಾತ್‌ನಲ್ಲಿ ಬೈಕ್ ಸವಾರರ ಹಾರ್ನ್‌ಗೆ ಕ್ಯಾರೇ ಅನ್ನದ ಯುವತಿಯರು! ವಿಡಿಯೋಗೆ ಭಾರೀ ಮೆಚ್ಚುಗೆ | Footpath Video

Footpath Video: ಫುಟ್‌ಪಾತ್ ಇರುವುದು ಪಾದಚಾರಿಗಳಿಗಾಗಿ. ಆದರೆ ಕೆಲ ವಾಹನ ಸವಾರರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಫುಟ್‌ಪಾತ್‌ನಲ್ಲೇ ಬೈಕ್ ಓಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇಂತಹ ಸವಾರರಿಗೆ ಮೂವರು ಯುವತಿಯರು ತಮ್ಮದೇ ರೀತಿಯಲ್ಲಿ ಪಾಠ ಕಲಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಮೂವರು ಯುವತಿಯರು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಹಿಂದಿನಿಂದ ಹಲವು ಬೈಕ್ ಸವಾರರು ಅದೇ ಫುಟ್‌ಪಾತ್‌ನಲ್ಲಿ ಬರುತ್ತಾರೆ. ಯುವತಿಯರು ದಾರಿ ಬಿಡಲಿ ಎಂಬ ಉದ್ದೇಶದಿಂದ ಸವಾರರು ಪದೇಪದೆ ಹಾರ್ನ್ ಮಾಡುತ್ತಾರೆ. ಆದರೆ ಯುವತಿಯರು ಮಾತ್ರ ಹಾರ್ನ್‌ಗೆ ಕ್ಯಾರೇ ಎನ್ನದೆ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಾರೆ. ಫುಟ್‌ಪಾತ್‌ನಿಂದ ಕೆಳಗಿಳಿದು ದಾರಿ ಮಾಡಿಕೊಡಲು ನಿರಾಕರಿಸುತ್ತಾರೆ.

ಯುವತಿಯರಿಂದ ಬೈಕ್ ಸವಾರರಿಗೆ ಪಾಠ

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪಾದಚಾರಿಗಳಿಗಾಗಿ ಮೀಸಲಿರುವ ಜಾಗದಲ್ಲಿ ಬೈಕ್ ಓಡಿಸಿಕೊಂಡು ಬರುವವರಿಗೆ ಯುವತಿಯರು ಸರಿಯಾದ ಉತ್ತರ ನೀಡಿದ್ದಾರೆ ಎಂದು ಹಲವರು ಶ್ಲಾಘಿಸಿದ್ದಾರೆ. 'ಈ ಮೂವರು ಯುವತಿಯರು ಬೈಕ್ ಸವಾರರಿಗೆ ತಕ್ಕ ಪಾಠ ಕಲಿಸಿದ್ದಾರೆ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಯುವತಿಯರ ನಡೆಗೆ ನೆಟ್ಟಿಗರ ಮೆಚ್ಚುಗೆ

ಫುಟ್‌ಪಾತ್‌ನಲ್ಲಿ ಬೈಕ್ ಓಡಿಸುವ ಸವಾರರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಯುವತಿಯರೇ, ಒಳ್ಳೆಯ ಕೆಲಸ ಮಾಡಿದ್ದೀರಿ. ಫುಟ್‌ಪಾತ್‌ನಲ್ಲಿ ಬೈಕ್ ಓಡಿಸುವವರಿಗೆ ನಾಚಿಕೆಯಾಗಬೇಕು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಭಾರತದಲ್ಲಿ ಫುಟ್‌ಪಾತ್ ಮೇಲೆ ವಾಹನ ಓಡಿಸುವುದಷ್ಟೇ ಅಲ್ಲ, ಪಾದಚಾರಿಗಳಿಗೇ ಹಾರ್ನ್ ಮಾಡುತ್ತಾರೆ. ಇದಕ್ಕಿಂತ ವಿಚಿತ್ರವೇನು ಬೇಕು?' ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಈ ಘಟನೆ ಬಳಿಕವೂ ಬೈಕ್ ಸವಾರರ ವರ್ತನೆಯಲ್ಲಿ ಬದಲಾವಣೆ ಆಗುತ್ತದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಫುಟ್‌ಪಾತ್‌ಗಳನ್ನು ವಾಹನ ಸವಾರರು ಬಳಸುವುದನ್ನು ತಡೆಯಲು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಹಾಗೂ ಸೂಕ್ತ ವ್ಯವಸ್ಥೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೈಪುರದಲ್ಲೂ ನಡೆದಿತ್ತು ಇಂತಹದ್ದೇ ಘಟನೆ

ಇದೇ ರೀತಿಯ ಮತ್ತೊಂದು ಘಟನೆ ಜೈಪುರದಲ್ಲೂ ನಡೆದಿತ್ತು. ಅಲ್ಲಿ ಮೂವರು ಯುವಕರು ಫುಟ್‌ಪಾತ್‌ನಲ್ಲಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಬೈಕ್ ಸವಾರರು ಪದೇಪದೆ ಹಾರ್ನ್ ಮಾಡಿದ್ದರು. ಆದರೆ ಯುವಕರು ದಾರಿ ಬಿಡದೆ ತಮ್ಮ ವೇಗದಲ್ಲೇ ಮುಂದುವರಿದಿದ್ದರು. ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿಯೂ ಯುವಕರ ನಡೆಯನ್ನು ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ: 10 ದಿನ ಹುಚ್ಚಾಸ್ಪತ್ರೆಯಲ್ಲಿ ರಹಸ್ಯ ಕಾರ್ಯಾಚರಣೆ! 72 ದಿನಗಳಲ್ಲಿ ವಿಶ್ವ ಪರ್ಯಟನೆ; ಜಗತ್ತನ್ನೇ ಬೆರಗುಗೊಳಿಸಿದ ದಿಟ್ಟ ಪತ್ರಕರ್ತೆ ಈಕೆ | Nellie Bly

ಒಟ್ಟಿನಲ್ಲಿ, ಫುಟ್‌ಪಾತ್ ಪಾದಚಾರಿಗಳ ಹಕ್ಕು ಎಂಬ ಸಂದೇಶವನ್ನು ಸಾರಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.