ಬೆಂಗಳೂರು: ಪಾರ್ಕ್‌ನಲ್ಲಿ ಕುಳಿತಿದ್ದ ವಿಚಾರಕ್ಕೆ ಯುವಕ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಚಾಕು ದಾಳಿ ನಡೆಸಿದ ಘಟನೆ ನಗರದ ದೊಮ್ಮಲೂರಿನ ಕನಕದಾಸ ಪಾರ್ಕ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಯುವತಿ ಅನಿಮಾ (22) ಚಾಕುವಿನಿ ದಾಳಿಗೆ ಗಾಯಗೊಂಡಿದ್ದಾರೆ. ಕೇರಳ ಮೂಲದ ಯುವತಿ ನಗರದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಅನಿಮಾ ತನ್ನ ಸ್ನೇಹಿತನೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು, ಪಾರ್ಕ್‌ನಲ್ಲಿ ಏಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಾರ್ಕ್‌ನಲ್ಲಿ ಕುಳಿತುಕೊಂಡರೆ ಇತರರು ಅನುಮಾನ ಪಡುವ ಸಾಧ್ಯತೆ ಇದೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ.
ಇದಕ್ಕೆ ಅನಿಮಾ ಅವರ ಸ್ನೇಹಿತ ಅಪರಿಚತ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸ್ನೇಹಿತನನ್ನು ರಕ್ಷಿಸಲು ಅನಿಮಾ ಮಧ್ಯಪ್ರವೇಶಿಸಿದ್ದು, ಚಾಕು ಆಕೆಯ ತುಟಿಗೆ ತಾಗಿ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.