ಬೆಂಗಳೂರು: ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ಯುವತಿ ಮೇಲೆ ಗಾಂಜಾ ಮತ್ತಿನಲ್ಲಿದ್ದ ಯುವಕರು ಲೈಂಗಿಕ ಕಿರುಕುಳ ನೀಡಿದಲ್ಲದೇ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಮೈಲಸಂದ್ರ ಸಮೀಪದ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಕಮ್ಮನಹಳ್ಳಿ ನಿವಾಸಿ ದೌರ್ಜನ್ಯಕ್ಕೊಳಗಾದ ಯುವತಿ.
ಭಾನುವಾರ ಸಂಜೆ ೪ ಗಂಟೆಗೆ ದಿನಸಿ ತರಲು ಯುವತಿ ಮನೆಯಿಂದ ಹೊರಟಿದ್ದಳು. ಅದೇ ರಸ್ತೆಯಲ್ಲಿ ಗಾಂಜಾ ನಶೆಯಲ್ಲಿ ತೇಲಾಡುತ್ತಿದ್ದ ಯುವಕರ ಕಣ್ಣು ಆಕೆ ಮೇಲೆ ಬಿದ್ದಿದ್ದು, ಆಕೆಯನ್ನು ಅಡ್ಡಗಟ್ಟಿ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಪ್ರತಿರೋಧ ತೋರಿದಾಗ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡು ಮನೆ ಸೇರಿಕೊಂಡರೂ ಬಿಡದ ಕಾಮುಕರು, ಯುವತಿ ಮನೆಗೆ ನುಗ್ಗಲು ಯತ್ನಿಸಿ ಅಟ್ಟಹಾಸ ಮೆರೆದಿದ್ದಾರೆ.
ಯುವತಿಯ ಮನೆಯ ಬಳಿ ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪುಂಡಾಟ ಮರೆಯುತ್ತ ಮಾಡುತ್ತಿದ್ದ ಚೇಷ್ಟೇ ಸ್ಥಳೀಯರ ಮೊಬೈಲ್ ಹಾಗೂ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಆನೇಕಲ್ ಹಾಗೂ ಬನ್ನೇರುಘಟ್ಟ ಅತ್ತಿಬೆಲೆ ಸುತ್ತಮುತ್ತ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಗಾಂಜಾ ಸೇವಿಸಿದ ಯುವಕರು ಅಮಾಯಕರ ಮೇಲೆ ಹಲ್ಲೆ ಮಾಡುವುದು ಯುವತಿಯರಿಗೆ ಕೀಟಲೆ ಮಾಡುವುದನ್ನು ಮಾಡುತ್ತಿದ್ದು, ನಡು ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿರುವ ಪುಡಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಆರೋಪಿಗಳು ಎಲ್ಲರೂ ಸ್ಥಳೀಯರೆ:
ಪುಂಡಾಟ ಮೆರೆದಿರುವ ಯುವಕರೆಲ್ಲರೂ ಸ್ಥಳೀಯರೇ ಎನ್ನುವ ಮಾಹಿತಿ ಗೊತ್ತಾಗಿದ್ದು ಆರೋಪಿಗಳ ಬಂಧನಕೆ ಪೊಲೀಸರು ಮುಂದಾಗಿದ್ದಾರೆ. ಬನ್ನೇರುಘಟ್ಟ ಸುತ್ತಮುತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ, ಗಾಂಜಾ ಮತ್ತಿನಲ್ಲಿ ಇರುವ ಪುಡಾರಿಗಳ ಪಡೆ ಯಾವಾಗಲೂ ಯುವಕ ಯುವತಿಯರು ಇರುವುದನ್ನು ನೋಡಿ ತೊಂದರೆ ಕೊಡುವ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.