Gang-rape: ಒಡಿಶಾದಲ್ಲಿ ಶುಕ್ರವಾರ ಸಂಜೆ ಉಡಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ವ್ಯಾನ್‌ನಲ್ಲಿ 21 ವರ್ಷದ ಯುವತಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಭಾನುವಾರ(ಆಗಸ್ಟ್ 31) ವರದಿಯಾಗಿದೆ.
ಘಟನೆ ಕುರಿತು ಸಂತ್ರಸ್ತೆ ತಾಯಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಉಡಾಲ-ಬಾಲಸೋರ್ ರಸ್ತೆಯಲ್ಲಿ ಶುಕ್ರವಾರ ಸಂಜೆ 6 ರಿಂದ 7 ಗಂಟೆಯ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಗಳೆಲ್ಲರೂ ಶರತ್ ಪ್ರದೇಶದವರಾಗಿದ್ದು, ಚಲಿಸುವ ವ್ಯಾನ್‌ನಲ್ಲಿ ಯುವತೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯುವತಿ ಸಹಾಯಕ್ಕಾಗಿ ಕಿರುಚಿದಾಗ ಆಕೆಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಬಂಗಿರಿಪೋಸಿಯಲ್ಲಿ ನಡೆದ ಮಕರ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭೇಟಿಯಾದ ಇಬ್ಬರು ಆರೋಪಿಗಳೊಂದಿಗೆ ತನ್ನ ಮಗಳಿಗೆ ಪರಿಚಯವಿತ್ತು. ಇಬ್ಬರೂ ಆಕೆಯ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂತರ ಖಾಸಗಿ ಕಂಪನಿಯಲ್ಲಿ ಉದ್ಯೋಗವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಅವರ ಮಾತುಗಳನ್ನು ನಂಬಿ ಮಗಳನ್ನು ಅವರೊಂದಿಗೆ ಕಳಿಸಿದ್ದೆ ಎಂದು ದೂರು ನೀಡಿದ್ದಾರೆ.
ಪರಿಚಯವಿದ್ದ ಇಬ್ಬರು ಆರೋಪಿಗಳು ಇತರ ನಾಲ್ವರೊಂದಿಗೆ ಯುವತಿಯ ಮನೆಗೆ ಹೋಗಿ ಅವಳನ್ನು ತಮ್ಮೊಂದಿಗೆ ಬರುವಂತೆ ಮನವೊಲಿಸಿದ್ದಾರೆ. ವಾಹನವು ಕಪ್ತಿಪಡ ಚೌಕ್‌ನಿಂದ ಬಾಲಸೋರ್ ಕಡೆಗೆ ಹೋಗುತ್ತಿದ್ದಾಗ, ಬಂಗಿರಿಪೋಸಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ವೇಳೆ ವ್ಯಾನ್‌ನೊಳಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಸಹಾಯಕ್ಕಾಗಿ ಆಕೆ ಕಿರುಚಿದಾಗ, ಆರೋಪಿಗಳು ಆಕೆಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಯುವತಿ ತನ್ನ ತಾಯಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿ ಕರೆದೊಯ್ದು ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಉಡಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶನಿವಾರ ಬೆಳಗಿನ ಜಾವ ಶರತ್ನ ಇಬ್ಬರನ್ನು ಬಂಧಿಸಿದ್ದಾರೆ. ಇತರೆ ನಾಲ್ವರು ತಪ್ಪಿಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)