ನ್ಯೂಸ್

ಫೋನ್ ಪೇ ಮಾಡುವುದಾಗಿ ಆಟೋ ಚಾಲಕನಿಗೆ ನಂಬಿಸಿ 23 ಸಾವಿರ ವಂಚಿಸಿದ ಕಳ್ಳಿ

ಬೆಂಗಳೂರು: ಫೋನ್ ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಂದ 23,500 ರೂ. ಪಡೆದು ಯುವತಿಯೊಬ್ಬಳು ವಂಚನೆ ಮಾಡಿದ್ದಾಳೆ.

ನಾಗರಬಾವಿಯ ಮಹದೇಶ್ವರ ಲೇಔಟ್ ನಿವಾಸಿ ಶಿವಕುಮಾರ್ ವಂಚನೆಗೆ ಒಳಗಾದ ಚಾಲಕ. ಆ.4ರಂದು ಶಿವಕುಮಾರ್, ಆಟೋ ಬಾಡಿಗೆ ಓಡಿಸುತ್ತಿದ್ದಾಗ ಚಂದ್ರಾ ಲೇಔಟ್ ಬಳಿ ಯುವತಿ ಏರಿ ಬನಶಂಕರಿ ರಿಂಗ್ ರಸ್ತೆ ಪಿಇಎಸ್ ಕಾಲೇಜು ಬಳಿಗೆ ಡ್ರಾಪ್ ಕೇಳಿದ್ದಾಳೆ.

ಮಾರ್ಗಮಧ್ಯದಲ್ಲಿ ಶಿವಕುಮಾರ್ ಮೊಬೈಲ್‌ಗೆ ಕರೆ ಮಾಡಿದ ಸ್ನೇಹಿತ ಹಣ ಕೊಡುವುದಾಗಿ ಹೇಳಿದ್ದು, ಪಿಇಎಸ್ ಕಾಲೇಜು ಬಳಿ ಭೇಟಿ ಆಗಲು ಪರಸ್ಪರ ಮಾತನಾಡಿಕೊಂಡಿದ್ದರು. ಇದನ್ನು ಆಲಿಸಿದ ಯುವತಿ, ಪಿಇಎಸ್ ಕಾಲೇಜು ಬರುತ್ತಿದಂತೆ ಕಾಲೇಜು ಶುಲ್ಕ ಪಾವತಿ ಮಾಡಬೇಕು. ಆದರೆ, ೆನ್ ಪೇನಲ್ಲಿ ಹಣ ಸ್ವೀಕರಿಸುವುದಿಲ್ಲ. ಎಟಿಎಂ ಕಾರ್ಡ್ ಸಹ ತಂದಿಲ್ಲ. ನಗದು ಕೊಟ್ಟರೇ ನಿಮಗೆ ಫೋನ್ ಪೇ ಮಾಡುವುದಾಗಿ ಹೇಳಿದ್ದಾಳೆ.

ಇದಕ್ಕೆ ಒಪ್ಪಿದ ಶಿವಕುಮಾರ್, ಸ್ನೇಹಿತನ ಬಳಿ ಹಣ ಪಡೆದು ಯುವತಿಗೆ ಕೊಟ್ಟಿದ್ದಾನೆ. ಹಣ ಪಡೆದ ಯುವತಿ, ಫೋನ್ ಪೇ ಮಾಡುವ ನೆಪದಲ್ಲಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಇತ್ತ ಶಿವಕುಮಾರ್ ಕಾದು ಕಾದು ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಗಿರಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.