ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಂಭುನಾಥ ಸ್ವಾಮೀಜಿ, ಎಚ್.ಕೆ.ಸುರೇಶ್, ಎಂ.ಮಮತಾ, ರಾಜೇಗೌಡ, ಬಸವರಾಜು ಶಿಗ್ಗಾವಿ, ರಘುಗೌಡ, ಯುವರಾಜೇಗೌಡ ಇದ್ದರು.  
ನ್ಯೂಸ್

ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಯುವಜನತೆ

ಬೇಲೂರು : ಕೆಂಪೇಗೌಡ ಸೇವಾ ಸಮಿತಿ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವ ವೇದಿಕೆ, ಕೆಂಪೇಗೌಡರ ಯುವ ವೇದಿಕೆ, ಮಹಿಳಾ ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು.

ಜಯಂತಿ ಅಂಗವಾಗಿ ಪಟ್ಟಣದ ಯಗಚಿ ಸೇತುವೆ ಸಮೀಪ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ ಬೆಳ್ಳಿ ರಥದಲ್ಲಿ ಕಲಾ ತಂಡಗಳೊಂದಿಗೆ ಮುಖ್ಯರಸ್ತೆಯಲ್ಲಿ ಕೆಂಪೇಗೌಡ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಒಕ್ಕಲಿಗ ಸಮುದಾಯ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಅಪ್ರತಿಮ ಆಡಳಿತಗಾರ ಕೆಂಪೇಗೌಡರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಅವರು ಬೆಂಗಳೂರಿನ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಇವರು ಕೇವಲ ಒಬ್ಬ ಸಾಮಾನ್ಯ ಅರಸರಾಗಿರದೆ, ಜನಪರ ಆಡಳಿತದಿಂದ ಇತಿಹಾಸ ನಿರ್ಮಿಸಿದ್ದಾರೆ. ಬೆಂಗಳೂರನ್ನು ಒಂದು ನಗರವಾಗಿ ನಿರ್ಮಿಸದೆ ಭವಿಷ್ಯದ ಅಗತ್ಯತೆ ಅರಿತು ವೈಜ್ಞಾನಿಕವಾಗಿ ಯೋಜನೆ ರೂಪಿಸಿ, ಅವರವರ ವೃತ್ತಿಗನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿದ್ದು, ಆರ್ಥಿಕ ಪ್ರಗತಿಗೆ ಆಧಾರವಾಯಿತು. ಜಾತಿ, ಧರ್ಮಗಳ ಭೇದವಿಲ್ಲದೆ ಸರ್ವ ಜನಾಂಗವನ್ನು ಸಮಾನವಾಗಿ ಕಂಡು ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಎಲ್ಲರ ಜೀವನ ಮಟ್ಟ ಸುಧಾರಿಸಲು ಶ್ರಮಿಸಿದವರು. ಅವರ ಆಡಳಿತ ನಂಬಿಕೆ, ಆತ್ಮವಿಶ್ವಾಸ, ನಿಷ್ಠೆ ಮತ್ತು ಮೌಲ್ಯ ಎಂಬ ತತ್ವಗಳ ಮೇಲೆ ನಿಂತಿತ್ತು. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿಯಾಗಿ ಕೋಟ್ಯಂತರ ಜನರಿಗೆ ಆಶ್ರಯವಾಗಿದೆ ಎಂದು ತಿಳಿಸಿದರು.

ಕೆಂಪೇಗೌಡರ ಜನಪರ ಆಡಳಿತ ಇಂದಿಗೂ ಪ್ರಸ್ತುತವಾಗಿದೆ. ಆದರೆ ಇಂದು ಯುವ ಜನಾಂಗ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಂಡು ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವ ಕೆಲಸ ಮಾಡುತಿದ್ದಾರೆ. ಸಮಾಜಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲ ಜ್ಞಾನಿಗಳು ಜನರ ಹಿತಕ್ಕಾಗಿ ಕೆಲಸ ಮಾಡಿದವರು. ಅಂತವರ ಹಾದಿಯಲ್ಲೇ ಋಷಿಗಳು, ಸ್ವಾಮೀಜಿಗಳು, ಗುರುಗಳು ಸಹ ಕೊಡುಗೆ ನೀಡಿದ್ದಾರೆ. ಅವರೆಲ್ಲರ ಹಾದಿಯಲ್ಲಿ ನಾವು ಸಾಗಬೇಕಿದೆ. ಅರಮನೆ ಕಟ್ಟುವುದಕ್ಕಿಂತ ಗುರುಮನೆ ಕಟ್ಟಬೇಕು ಎಂಬ ಗಾದೆಯಂತೆ ಕೆಂಪೇಗೌಡರು ಹಾಕಿಕೊಟ್ಟ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಮುಂದಿನ ದಿನಗಳಲ್ಲಿ ಬೇಲೂರಿನಲ್ಲಿ ಶಾಸಕರ ನೇತೃತ್ವದಲ್ಲಿ ಬಿಜಿಎಸ್ ವೈಭವದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬೇಲೂರಿನ ಇತಿಹಾಸವನ್ನು ಪ್ರಪಂಚಕ್ಕೆ ತಿಳಿಸುವ ಕೆಲಸ ಮಾಡೋಣ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಬೇಲೂರಿನಲ್ಲಿ ಪ್ರಥಮವಾಗಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಿ ಹಾಗೂ ರಾಜ್ಯದಲ್ಲೆ ಪ್ರಥಮ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪಿಸಿ ಸಮಾಜಕ್ಕೆ ಸ್ವಾಭಿಮಾನ ತಂದು ಕೊಟ್ಟಿರುವುದು ಶ್ಲಾಘನೀಯವಾಗಿದೆ. ಇಲ್ಲಿನವರು ಮಠಕ್ಕೆ ಮತ್ತು ಸ್ವಾಮೀಜಿಯವರಿಗೆ ಆದರ್ಶ ಪ್ರಾಯರಾಗಿದ್ದಾರೆ. ಆದರೆ ಬೇಲೂರಿನ ಒಕ್ಕಲಿಗರ ಸಂಘಕ್ಕೆ ಮೇಟಿಯೇ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಈ ವಿಚಾರವಾಗಿ ಈಗಾಗಲೇ ಎರಡರಿಂದ ಮೂರು ಸಭೆಯಾಗಿದೆ. ಆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸ್ವಾಮೀಜಿಯವರು ಮಧ್ಯೆ ಪ್ರವೇಶಿಸಬೇಕಿದೆ. ಸಂಘದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಮುನ್ನಡೆಸಬೇಕು. ಎಲ್ಲ ಮುಖಂಡರು ಬಿನ್ನಾಭಿಪ್ರಾಯ ಮರೆತು ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಂಘವನ್ನು ಬಲಿಷ್ಟವಾಗಿ ಕಟ್ಟೋಣ. ದೇವಸ್ಥಾನದ ಆವರಣ ಬಿಜಿಎಸ್ ವೈಭವ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ಎಂ.ಮಮತಾ, ಬಿಇಒ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಯುವ ಘಟಕದ ಅಧ್ಯಕ್ಷ ಯುವರಾಜೇಗೌಡ, ಮುಖಂಡರಾದ ಬಿ.ಡಿ.ಚಂದ್ರೆಗೌಡ, ಎಂ.ಎ.ನಾಗರಾಜ್, ಪುಟ್ಟಸ್ವಾಮಿಗೌಡ, ಪೃಥ್ವಿ, ಗಣೇಶ್, ಅಭಿಗೌಡ, ದಿನೇಶ್, ಸತೀಶ್ ಸೇರಿದಂತೆ ಪುರಸಭೆ ಸದಸ್ಯರಿದ್ದರು.