ನ್ಯೂಸ್

ಯುವತಿಯರನ್ನು ಪಾರ್ಟಿ ಮಾಡೋಣ ಎಂದು ಕರೆದು ಮಾಡಬಾರದ್ದನ್ನು ಮಾಡಲು ಪ್ರಯತ್ನಿಸಿದ ಯುವಕರು!

ಬೆಂಗಳೂರು: ಈ ಯುವಕರು ಪಾರ್ಟಿ ಮಾಡೋಣ ಬನ್ನಿ ಎಂದು ಯುವತಿಯರನ್ನು ಕರೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ.

ಪಾರ್ಟಿ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಯತ್ನ ಮಾಡಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದಿತ್ಯ ಹಾಗೂ ಅಜಯ್ ಬಂಧಿತ ಆರೋಪಿಗಳಾಗಿದ್ದು ಇವರು ನಗರದ ವಿವಿಧ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಂತೆಯೇ ಯುವತಿಯರೂ ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟಿಗೆ ಪಾರ್ಟಿ ಮಾಡಲು‌ ಸೇರಿದಾಗ ಈ ಯುವಕರು ಕೃತ್ಯ ಎಸಗಿದ್ದಾರೆ.

ಕಾಶ್ಮೀರಿ ಮೂಲದ ಯುವತಿ ಹಾಗೂ ಇನ್ನೊಬ್ಬ ಸ್ನೇಹಿತೆಯನ್ನ ಪಾರ್ಟಿ ಮಾಡಲು ಈ ಇಬ್ಬರು ಯುವಕರು ಕರೆದಿದ್ದರು. ಈ ವೇಳೆ ಕುಡಿದ ಬಳಿಕ ಇಬ್ಬರು ಯುವತಿಯರ ಮೇಲೆ ಇವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇವರಿಂದ ಪಾರಾಗಲು ಯುವತಿಯರು ವಾಶ್​ರೂಂ ಸೇರಿ ಚಿಲಕ ಹಾಕಿಕೊಂಡಿದ್ದಾರೆ.

ಈ ಘಟನೆ ಬಳಿಕ ಯುವತಿಯರು ವಿವೇಕನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸದ್ಯ ಇಬ್ಬರು ವಿವೇಕನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.