ನ್ಯೂಸ್

ತುಂಬಾ ರೇಗಿಸುತ್ತಿದ್ದ ಅಂತ ಸ್ನೇಹಿತನ ಪ್ರಾಣವನ್ನೇ ತೆಗೆದ ಯುವಕ

ಬೆಂಗಳೂರು: ತುಂಬಾ ರೇಗಿಸುತ್ತಿದ್ದ ಅಂತ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಗರದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​.ಎಮ್​.ಝೆಡ್ ಬಳಿ ನಡೆದಿದೆ.

ಮಲ್ಲಿಕಾರ್ಜುನ (24) ಕೊಲೆಯಾದ ಯುವಕ. ಸ್ನೇಹಿತನನ್ನು ಕೊಲೆ ಮಾಡಿದ್ದ ರಾಜರಥ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಲ್ಲಿಕಾರ್ಜುನ್ ಮತ್ತು ಆರೋಪಿ ರಾಜರಥ ಇಬ್ಬರು ಆರ್​ಎಮ್ ಝೆಡ್​ನ ಲೈಫ್ ಸ್ಟೈಲ್ಸ್ ಮಾಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಟ್ಟೆಗಳು ಹಾಗೂ ಹಣಕಾಸಿನ ವಿಚಾರಕ್ಕೆ ಸದಾ ರಾಜರಥನನ್ನು ಮಲ್ಲಿಕಾರ್ಜುನ ರೇಗಿಸ್ತಿದ್ದ.

ಸದಾ ರೇಗಿಸುವುದನ್ನು ಸಹಿಸದ ರಾಜರಥ, ಮಲ್ಲಿಕಾರ್ಜನನ ಜತೆ ಜಗಳಕ್ಕೆ ಇಳಿದಿದ್ದ. 26ನೇ ತಾರೀಖು ಸಂಜೆ ಮಾಲ್ ಬಳಿಯೇ ಕತ್ತರಿಯಿಂದ ಎದೆಗೆ ಇರಿದು ರಾಜರಥ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ.