ನ್ಯೂಸ್

ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಬರ್ಬರ ಹತ್ಯೆ

ಚಿಕ್ಕಮಗಳೂರು: ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದ ವೇಳೆ ಯುವಕನೊಬ್ಬ ಬರ್ಬರ ಹತ್ಯೆಯಾಗಿರುವ ಆತಂಕಕಾರಿ ಘಟನೆ ತರೀಕೆರೆ ಪಟ್ಟಣದಲ್ಲಿ ನಿನ್ನೆ (ಜೂ.3) ನಡೆದಿದೆ.

ವರುಣ್​ (28) ಕೊಲೆಯಾದ ಯುವಕ. ಶಾಸಕರ ಅಭಿನಂದನಾ ಸಮಾರಂಭ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿಡಿಗೇಡಿಯೊಬ್ಬ ವರುಣ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಂಜು ಹಾಗೂ ಸಂಜು ಎಂಬುವರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ನಟಿ ಪ್ರಿಯಾ ಆನಂದ್!​

ಕಬಾಬ್ ಮೂರ್ತಿಯಿಂದ ಕೃತ್ಯ

ಘಟನೆಯ ವಿವರಣೆಗೆ ಬರುವುದಾದರೆ, ತರೀಕೆರೆ ಶಾಸಕ ಜಿ.ಎಚ್​. ಶ್ರೀನಿವಾಸ್​ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಆರ್ಕೆಸ್ಟ್ರಾ ತಂಡವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ಆರೋಪಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ.

ಹೊಟ್ಟೆ, ಪಕ್ಕೆಲುಬಿಗೆ ಇರಿತ

ಇತ್ತ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಆಕ್ರೋಶಭರಿತ ಕಬಾಬ್​ ಮೂರ್ತಿ, ವರುಣ್​ನ ಹೊಟ್ಟೆ ಹಾಗೂ ಪಕ್ಕೆಲುಬಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ವರುಣ್​ನನ್ನು ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವರುಣ್ ಮೃತಪಟ್ಟಿದ್ದಾನೆ. ಮಂಜು ಹಾಗೂ ಸಂಜು ಎಂಬವರ ಕೈ ಹಾಗೂ ಕಾಲಿಗೂ ಕಬಾಬ್​ ಮೂರ್ತಿ ಚಾಕು ಇರಿದಿದ್ದಾನೆ. ಇದನ್ನೂ ಓದಿ: ಯುವನಿಧಿ ಯೋಜನೆ ಅನುಷ್ಠಾನಕ್ಕೆ ಆದೇಶ; ಏನಿದೆ ಷರತ್ತು? ತಪ್ಪಿಗೆ ದಂಡವೂ ಇದೆ ಎಚ್ಚರಿಕೆ!

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)