Plane Engine : ವಿಮಾನದ ಇಂಜಿನ್‌ನಲ್ಲಿ ಸಿಲುಕಿ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಇಟಲಿಯ ಮಿಲನ್ ಬರ್ಗಾಮೋ ವಿಮಾನ ನಿಲ್ದಾಣದಲ್ಲಿ ನಿನ್ನೆ (ಜುಲೈ 08) ನಡೆದಿದೆ.
ಸ್ಪೇನ್ನ ಆಸ್ಟೂರಿಯಸ್‌ಗೆ ತೆರಳುತ್ತಿದ್ದ A319 ವೊಲೊಟಿಯಾ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ರನ್‌ವೇಗೆ ಓಡಿಬಂದ 35 ವರ್ಷದ ವ್ಯಕ್ತಿ ಇಂಜಿನ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯು ಗ್ರೌಂಡ್ ಸಿಬ್ಬಂದಿ ಎಂದು ವರದಿಯಾಗಿದೆ. ಇಂಜಿನ್‌ನಲ್ಲಿ ಸಿಲುಕಿಕೊಂಡ ಆತ ತಕ್ಷಣವೇ ಸಾವಿಗೀಡಾಗಿದ್ದಾನೆ.
ಅಪಘಾತದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ವಿಮಾನ ಸಂಚಾರದಲ್ಲಿ ಅಡಚಣೆ ಉಂಟಾಯಿತು ಎಂದು ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಆರು ಸಿಬ್ಬಂದಿ, ಇಬ್ಬರು ಪೈಲಟ್‌ಗಳು ಮತ್ತು ನಾಲ್ವರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 154 ಪ್ರಯಾಣಿಕರಿದ್ದರು. ಈ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 2024 ರಲ್ಲಿ ಈ ವಿಮಾನ ನಿಲ್ದಾಣವು 17 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿತು.
ಅಂದಹಾಗೆ, ನಿನ್ನೆ ಬೆಳಗ್ಗೆ 10.20ಕ್ಕೆ ಈ ಅಪಘಾತ ಸಂಭವಿಸಿದೆ. ಸದ್ಯ ಈ ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಈ ಕುರಿತಾಗಿ ತನಿಖೆ ನಡೆಯುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ನಂತರ ಒಟ್ಟು ಒಂಬತ್ತು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು ಮತ್ತು ಎಂಟು ವಿಮಾನಗಳನ್ನು ರದ್ದುಗೊಳಿಸಲಾಯಿತು. ಆದರೆ, ಮಧ್ಯಾಹ್ನದ ನಂತರ ವಿಮಾನ ಸೇವೆಗಳು ಪುನರಾರಂಭಗೊಂಡಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್)