ಸಾಂದರ್ಭಿಕ ಚಿತ್ರ 
ನ್ಯೂಸ್

2 ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಖೋಖೋ ಆಟಗಾರ್ತಿ, ಮಸಣದ ಪಾಲು

rashmirhebbur

ಲಖನೌ: ರಾಷ್ಟ್ರಮಟ್ಟದ ಖೋಖೋ ಆಟಗಾರ್ತಿಯಾಗಿದ್ದ 24 ವರ್ಷ ವಯಸ್ಸಿನ ಯುವತಿಯೊಬ್ಬಳು ರೈಲ್ವೇ ನಿಲ್ದಾಣದ ಬಳಿ ಕೊನೆ ಉಸಿರೆಳೆಯುತ್ತಾ ಪತ್ತೆಯಾಗಿರುವ ಪ್ರಕರಣ ಉತ್ತರಪ್ರದೇಶದ ಬಿಜನೋರ್​ನಲ್ಲಿ ನಡೆದಿದೆ. ಬರುವ ನವೆಂಬರ್​ನಲ್ಲಿ ಆಕೆಯ ಮದುವೆ ನಿಗದಿಯಾಗಿದ್ದು, ಹಸೆಮಣೆ ಏರಬೇಕಿದ್ದ ಯುವತಿ ಮಸಣದ ಪಾಲಾಗಿದ್ದಾಳೆ. ಮೃತಳ ಮೇಲೆ ಲೈಂಗಿಕ ಅತ್ಯಾಚಾರ ಕೂಡ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬಿಜ್​ನೋರ್​ನ ಕುಟಿಯಾ ಕಾಲೋನಿ ನಿವಾಸಿಯಾಗಿದ್ದ ಯುವತಿಯು, 2016 ರ ರಾಷ್ಟ್ರ ಮಟ್ಟದ ಖೋಖೋ ಚ್ಯಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದಲ್ಲದೆ ಇಂಟರ್​ಕಾಲೇಜು ಮಟ್ಟದ ಆಟಗಾರ್ತಿಯಾಗಿದ್ದಳು. ಸೆಪ್ಟೆಂಬರ್ 10 ರ ಬೆಳಿಗ್ಗೆ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಸಲ್ಲಿಸಲು ತೆರಳಿದ್ದಳು. ತಡವಾದರೂ ಹಿಂತಿರುಗದಿದ್ದ ಅವಳ ಫೋನ್​ ಸ್ವಿಚ್ಡ್​ ಆಫ್​ ಬರುತ್ತಿತ್ತು. ನೆರೆಯ ಮಹಿಳೆಯೊಬ್ಬರು ಬಿಜನೋರ್​ ರೈಲ್ವೆ ನಿಲ್ದಾಣದ ರೈಲ್ವೇ ಸ್ಲೀಪರ್​​ಗಳ ಹತ್ತಿರ ಹಾದುಹೋಗುವಾಗ ಯುವತಿಯು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನ್ನು ನೋಡಿದರು. ಅವಳ ಕುತ್ತಿಗೆಗೆ ದುಪಟ್ಟಾ ಬಿಗಿಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದು, ಪೊಲೀಸರಿಗೆ ವಿಷಯ ತಿಳಿಸಲಾಯಿತು ಎನ್ನಲಾಗಿದೆ.

ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಕೆ ಸಾವಪ್ಪಿದ್ದು, ಪ್ರಾಥಮಿಕ ಪರೀಕ್ಷೆ ನಡೆಸಿದ ವೈದ್ಯರು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಹೇಳಿದ್ದಾರೆ. ಕೊಲೆಗೆ ಮುಂಚೆ ರೇಪ್​ ಕೂಡ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)