ನ್ಯೂಸ್

400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​

ಮುಂಬೈ: ಸ್ಟಾಕ್​ ಸ್ಪ್ಲಿಟ್​ (ಷೇರು ವಿಭಜಿಸಲು) ಮಾಡಲು ಈ ಕಂಪನಿ ಸಜ್ಜಾಗಿದೆ. ಇದಕ್ಕಾಗಿ ಈ ಕಂಪನಿಯ ಮಂಡಳಿಯ ಸಭೆಯು ಶುಕ್ರವಾರದಂದು (ಜನವರಿ 19 ರಂದು) ನಡೆಯಲಿದೆ.

ಇದೇ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ (Persistent Systems Ltd). ಈ ಕಂಪನಿಯ ಷೇರು ವಿಭಜನೆಯ ಕುರಿತು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಷೇರಿನ ಮುಖಬೆಲೆಯನ್ನು ಕಡಿಮೆ ಮಾಡುವುದನ್ನು ಷೇರು ವಿಭಜನೆ ಎಂದು ಕರೆಯಲಾಗುತ್ತದೆ. 10 ರೂಪಾಯಿಯ ಮುಖಬೆಲೆ ಇರುವ ಷೇರಿನ ಮೌಲ್ಯವನ್ನು 1 ರೂಪಾಯಿ ಇಳಿಸಿ, ಷೇರನ್ನು 10 ಭಾಗಗಳಾಗಿ ವಿಭಜಿಸಬೇಕಾಗುತ್ತದೆ. ಪ್ರಸ್ತುತ ಈ ಕಂಪನಿಯ ಪ್ರತಿ ಷೇರು ಬೆಲೆ ಅಂದಾಜು 7,680 ರೂಪಾಯಿ ಇದೆ. ಇದನ್ನು 10 ಭಾಗಗಳಾಗಿ ವಿಭಜಿಸಿದರೆ, ಆಗ ಪ್ರತಿ ಷೇರು ಬೆಲೆಯು ಅಂದಾಜು 768 ರೂಪಾಯಿ ಆಗುತ್ತದೆ.

ಷೇರುಗಳ ಪರಿಮಾಣ ಮತ್ತು ದ್ರವ್ಯತೆ ಸುಧಾರಿಸಲು ಷೇರುಗಳಲ್ಲಿ ವಿಭಜನೆಯನ್ನು ನಿರ್ದಿಷ್ಟವಾಗಿ ಮಾಡಲಾಗುತ್ತದೆ. ಚಿಲ್ಲರೆ ಷೇರುದಾರರು ಹೆಚ್ಚು ಹೆಚ್ಚು ಹೂಡಿಕೆ ಮಾಡುವಂತೆ ಮಾಡುವುದೇ ಷೇರು ವಿಭಜನೆಯ ಗುರಿಯಾಗಿರುತ್ತದೆ.

ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್‌ನ ಷೇರುಗಳ ಒಂದು ವಾರದಲ್ಲಿ 5 ಪ್ರತಿಶತದಷ್ಟು ಲಾಭ ನೀಡಿವೆ. ಈ ಷೇರು ಮೂರು ತಿಂಗಳಲ್ಲಿ 35 ಪ್ರತಿಶತದಷ್ಟು ಗಳಿಕೆ ಮಾಡಿದೆ. ಒಂದು ವರ್ಷದಲ್ಲಿ ಶೇಕಡಾ 90ರಷ್ಟು ಮತ್ತು 3 ವರ್ಷಗಳಲ್ಲಿ 400 ಪ್ರತಿಶತದಷ್ಟು ಏರಿಕೆಯನ್ನು ಈ ಷೇರು ಕಂಡಿದೆ.

ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ ಭಾರತೀಯ ಮೂಲದ ಕಂಪನಿಯಾಗಿದೆ. ಇದು ಕಾರ್ಯತಂತ್ರ ಮತ್ತು ಇಂಜಿನಿಯರಿಂಗ್ ಸಾಫ್ಟ್‌ವೇರ್ ಕಂಪನಿಯಾಗಿದೆ. ವ್ಯಾಪಾರಿ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಮತ್ತು ಆಧುನೀಕರಿಸಲು ಸಹಾಯ ಮಾಡುತ್ತದೆ.

ಇಂಜಿನಿಯರಿಂಗ್ ಸೇವೆಗಳು, ಕ್ಲೌಡ್-ಆಧಾರಿತ ಪ್ಲಾಟ್‌ಫಾರ್ಮ್ ಪರಿಹಾರಗಳು ಮತ್ತು ಇಂಟರ್ನೆಟ್ ಪ್ರೊಟೊಕಾಲ್ ಆಧಾರಿತ ಉತ್ಪನ್ನಗಳನ್ನು ಈ ಕಂಪನಿಯು ಒದಗಿಸುತ್ತದೆ.

ಕಂಪನಿಯು ಪ್ರಸ್ತುತ ತ್ರೈಮಾಸಿಕದಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ. ಕಂಪನಿಯು ಕಳೆದ ಐದು ವರ್ಷಗಳಲ್ಲಿ ವಾಷಿರ್ಕವಾಗಿ ಸರಾಸರಿ ಶೇಕಡಾ 24.6ರಷ್ಟು ಲಾಭದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಈ ಕಂಪನಿಯು 36.6 ಪ್ರತಿಶತ ಲಾಭಾಂಶವನ್ನು ನೀಡಿದೆ. ಕಳೆದ 10 ವರ್ಷಗಳಲ್ಲಿ ಕಂಪನಿಯ ಸರಾಸರಿ ಮಾರಾಟದ ಬೆಳವಣಿಗೆಯು ಶೇಕಡಾ 17.4ರಷ್ಟಿದೆ. ಆದರೆ, ಈ ಕಂಪನಿಯ ಷೇರುಗಳ ಬೆಲೆಯು ಪುಸ್ತಕದ ಮೌಲ್ಯಕ್ಕಿಂತ 13.4 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.