ನ್ಯೂಸ್

ತಿಳಿದು ಬದುಕಬೇಕು

ಸುದೀಪ್​ ವಿ.ಎನ್​
ಚಿನ್ನ ಉಜ್ಜಿದಷ್ಟ್ಟೂ ಹೊಳಪು ಹೆಚ್ಚುವಂತೆ ಜೀವನದಲ್ಲಿ ಕಷ್ಟಗಳು ನಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ. ಗಿಡದಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಅದರಲ್ಲಿ ಹೂ ಅರಳಬೇಕು. ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವುಗಳಿದ್ದರೂ ಮುಖದಲ್ಲಿ ಮಂದಸ್ಮಿತ ತುಂಬಿರಬೇಕು. ನಮ್ಮಆಹಾರ ಎಷ್ಟು ಶುದ್ಧವಾಗಿರಬೇಕೋ ಹಾಗೆಯೇ ಬಾಯಿಂದ ಹೊರ ಬರುವ ಮಾತುಗಳೂ ಅಷ್ಟೇ ಶುದ್ಧವಾಗಿರಬೇಕು. ಆಗ ಸಂಬಂಧಗಳು ಮತ್ತು ಸ್ನೇಹ ಎರಡೂ ಗಟ್ಟಿಯಾಗಿರುತ್ತವೆ ಮತ್ತು ಬೆಳೆಯುತ್ತವೆ. ಮನುಷ್ಯನ ಒಳ್ಳೆಯತನ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆೆ. ಬಣ್ಣದ ಮಾತುಗಳು ಮುತ್ತುಗಳಾಗುತ್ತವೆ. ಸತ್ಯದ ಮಾತುಗಳು ಮುಳ್ಳುಗಳಾಗುತ್ತವೆ. ಇದೇ ಇಂದಿನ ಜನರ ಮನಸ್ಸಿನ ನಿಜವಾದ ಸ್ಥಿತಿ. ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದಾಗಬೇಕೆಂದಿಲ್ಲ. ರಾತ್ರಿ ಕಳೆದು ಹಗಲು ಬರುವಂತೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಜೀವನದಲ್ಲಿ ಆತ್ಮ ವಿಶ್ವಾಸ ಮುಖ್ಯ. ಜೀವನದಲ್ಲಿ ಹಲವು ದಾರಿಗಳು ಎದುರಾಗುತ್ತವೆ. ಆದರೆ ಸರಿಯಾದ ದಾರಿ ಯಾವುದೆಂದು ತಿಳಿದು ಹೆಜ್ಜೆ ಹಾಕಬೇಕು. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆೆ.

ಹೊಟ್ಟೆ ತುಂಬಿದ ಶ್ರೀಮಂತ ಆಹಾರದಲ್ಲಿ ರುಚಿ ಹುಡುಕುತ್ತಾನೆ. ಬಡವ ಆಹಾರವೇ ದೇವರು ಎಂದು ಭಾವಿಸುತ್ತಾನೆ. ನಂಬಿದವರೆಲ್ಲ ಕೈ ಬಿಟ್ಟರೂ ನಮ್ಮವರೆಲ್ಲ ಕೈ ಕೊಟ್ಟರೂ ಕೊನೆಯತನಕ ಕೈ ಹಿಡಿದು ಕಾಪಾಡುವವನು ಭಗವಂತನಲ್ಲದೇ ಬೇರಾರೂ ಅಲ್ಲ. ಕೆಟ್ಟ ಅಭ್ಯಾಸ ಇರುವವನು ಬದಲಾಗಬಹುದು. ಆದರೆ ಕೆಟ್ಟ ಯೋಚನೆ ಇರುವವನು ಜೀವನದಲ್ಲಿ ಎಂದೆಂದಿಗೂ ಬದಲಾಗುವುದಿಲ್ಲ. ಕತ್ತಲು ಎಷ್ಟೇ ದಟ್ಟವಾಗಿರಬಹುದು. ಆದರೆ ಸೂರ್ಯೋದಯ ಆಗುವುದನ್ನು ಅದು ತಡೆಯಲಾಗದು. ಎಲ್ಲಾ ಶಕ್ತಿಯೂ ನಿನ್ನೊಳಗೆ ಇದೆ. ಅದರಲ್ಲಿ ವಿಶ್ವಾಸವನ್ನಿಡು. ನೀನು ದುರ್ಬಲ ಇರುವೆನೆಂದು ಭಾವಿಸಬಾರದು. ಅಂದುಕೊಂಡಂತೆ ಬದುಕಲು ತುಂಬಾ ಹಣ ಬೇಕು. ಹೊಂದಿಕೊಂಡು ಬಾಳಲು ಒಳ್ಳೆಯ ಗುಣ ಸಾಕು. ಒಬ್ಬರು ಇನ್ನೊಬ್ಬರನ್ನು ತುಳಿದು ಬದುಕಬಾರದು. ತಿಳಿದು ಬದುಕಬೇಕು ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ನಿರೂಪಿಸಿದ್ದಾರೆ.