ನ್ಯೂಸ್

ಆಶ್ರಯಕ್ಕೂ ಮಗನಾಗಬೇಕು

ಆಧುನಿಕಯುಗದ ಮಾನವನಲ್ಲಿ ಮಲಗಿದ ದೇವನಿಗಿಂತ, ಎಚ್ಚೆತ್ತಿರುವ ರಾಕ್ಷಸೀ ಶಕ್ತಿ ಬಲಶಾಲಿಯಾಗಿದೆ. ಸನಾತನ ಧರ್ಮದ ವಿಧಿ-ವಿಧಾನ, ಧರ್ಮ-ನೀತಿ, ಸಂತ-ಶರಣರ, ನಡೆ-ನುಡಿ, ಸಹಾಯ-ಸಹಕಾರ, ಶೀಲ-ಧ್ಯೇಯ ಆದರ್ಶಗಳೆಲ್ಲವೂ ಸವಕಲಾಗಿವೆ.

ಅಧೋಮುಖಿ ಪ್ರವೃತ್ತಿ ಮುಂದುವರಿಯುತ್ತಿದೆ. ಹಲವಾರು ದೇವರುಗಳಿಗೆ ಹರಕೆ ಹೊತ್ತು ಬೇಡಿ ಪಡೆದ ಮಗ, ಮಡದಿಯ ಮೋಹ ಪಾಶಕ್ಕೆ ಬಂಧಿತನಾಗಿ ವೃದ್ಧಾಶ್ರಮದ ಬಾಗಿಲು ತಟ್ಟಿ ಹಡೆದವರನ್ನು ಅಲ್ಲಿಟ್ಟು ಸಂಬಂಧದ ಸೂತ್ರವನ್ನೇ ಹರಿದೊಗೆವುದನ್ನು ಕಾಣುತ್ತಿದ್ದೇವೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ವಾಣಿಯನ್ನು ಅನುಸರಿಸಿದ್ದಲ್ಲಿ ವೃದ್ಧಾಶ್ರಮಗಳೇ ನಿರ್ಮಾಣ ಆಗುತ್ತಿರಲಿಲ್ಲ. ‘ಮಾತೃ ದೇವೋಭವ’ ಎಂಬ ಆರ್ಯೂೕಕ್ತಿ ಇಂದು ಮೌಲ್ಯ ಕಳೆದುಕೊಂಡಿದೆ. ದುಡ್ಡು ಕೊಟ್ಟರೆ ಈ ಪ್ರಪಂಚದಲ್ಲಿ ಏನೆಲ್ಲಾ ಸಿಗುತ್ತದೆ, ಆದರೆ ಜನ್ಮಕೊಟ್ಟ ತಾಯಿ ಸಿಗಲಾರಳು.

ಸ್ವಾಮಿ ವಿವೇಕಾನಂದರು ಓದುವ ಶಾಲೆಯಲ್ಲಿ ಗುರುಗಳು ಒಮ್ಮೆ ವಿದ್ಯಾರ್ಥಿಗಳಿಗೆ, ನಾಳೆ ಶಾಲೆಗೆ ಬರುವಾಗ ಸ್ವರ್ಗದಲ್ಲಿಯ ಮುಷ್ಠಿಮಣ್ಣು ತನ್ನಿ ಎಂದರಂತೆ. ಆಗ ವಿದ್ಯಾರ್ಥಿಗಳಿಗೆಲ್ಲ ಬಿಡಿಸಲಾರದ ಸಮಸ್ಯೆಯಾಯ್ತು, ಸ್ವರ್ಗ ಎಲ್ಲಿ? ನಾವು ಎಲ್ಲಿ? ಮಣ್ಣು ತರುವುದು ಹೇಗೆ? ಎಂದು. ಆದರೆ ಸ್ವಾಮಿವಿವೇಕಾನಂದರು (ನರೇಂದ್ರನು) ಮಣ್ಣು ತೆಗೆದುಕೊಂಡು ಬಂದು ಗುರುಗಳಿಗೆ ಒಪ್ಪಿಸಿದರು. ವಿದ್ಯಾರ್ಥಿಗಳೆಲ್ಲ ಆಶ್ವರ್ಯಪಟ್ಟರು.

ಗುರುಗಳು ಕೇಳಿದರು: ನರೇಂದ್ರ ಈ ಮಣ್ಣು ತರಲು ಸ್ವರ್ಗಕ್ಕೆ ಹೋಗಿದ್ದೆಯಾ?. ನರೇಂದ್ರ ಉತ್ತರಿಸಿ, ‘ಗುರುಗಳೇ, ನನಗೆ ನನ್ನ ತಾಯಿಯೇ ಸ್ವರ್ಗ. ಅವಳ ಪಾದದಡಿಯ ಮಣ್ಣು ತಂದಿದ್ದೇನೆ. ತಾಯಿಗಿಂತ ಸ್ವರ್ಗ ಬೇರೆ ಇಲ್ಲ’ ಎಂದಾಗ ಗುರುಗಳ ಕಣ್ಣುಗಳು ಹನಿಗೂಡಿದವಂತೆ. ತಂದೆ-ತಾಯಿಗಳು ಅಗಲಿದ ಬಳಿಕ ಊರಿಗೆಲ್ಲಾ ಊಟ ಹಾಕಿ ಪೋಟೋಕ್ಕೆ ಹೂಹಾರ ಹಾಕಿದರೆ ತಂದೆ-ತಾಯಿಗಳ ಕೃಪೆ ಆಗಬಹುದೇ? ನೀರಿಗೆ ನೀರು ಕುಡಿಸಿದರೆ, ಭೂಮಿಗೆ ಮಣ್ಣು ಹೊತ್ತರೆ, ಬೆಟ್ಟಕ್ಕೆ ಕಲ್ಲು ಹೊದಿಸಿದರೆ ಪ್ರಯೋಜನವೇನು?. ಜೀವಂತ ದೇವರನ್ನು ತಿರಸ್ಕರಿಸಿ ಅವರನ್ನು ನರಳುವಂತೆ ಮಾಡಿ, ಕಲ್ಲುದೇವರಿಗೆ ಕೈಮುಗಿದರೆ ಬಂತೇನು? ಕೇವಲ ಆಸ್ತಿಗೆ ಮಗನಾಗದೇ, ಆಶ್ರಯಕ್ಕೆ ಮಗನಾದರೆ ಹೆತ್ತವರ ಋಣ ಭಾರದಿಂದ ಮುಕ್ತನಾಗಲು ಸಾಧ್ಯ.