ನವದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ದಂಡವಿಧಿಸಲಾಗುವುದು ಎಂಬ ನಿಯಮ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಸ್ಪಷ್ಟಪಡಿಸಿದೆ.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ಸ್ಪಷ್ಟನೆ ನೀಡಿದ್ದಾರೆ. ನೀವು ಕಾರಿನಲ್ಲಿ ಒಬ್ಬರೇ ಇದ್ದು, ಗಾಡಿ ಓಡಿಸುತ್ತಿದ್ದೀರಿ ಎಂದಾದರೆ ಮಾಸ್ಕ್ ಕಡ್ಡಾಯವಲ್ಲ. ಅದನ್ನು ಕೊವಿಡ್-19 ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡವಿಧಿಸುವುದಿಲ್ಲ. ನಾವು ಅಂಥ ಯಾವುದೇ ಸೂಚನೆಯನ್ನೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ ಗುಂಪಿನಲ್ಲಿ ಇದ್ದಾಗ ಮಾಸ್ಕ್ ಕಡ್ಡಾಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಲಹೆಗಾರನಾಗಿದ್ದೆ ಎಂದು ಒಪ್ಪಿಕೊಂಡ ಫೇಸ್‌ಬುಕ್ ಎಂಡಿ: ವಿಚಾರಣೆ ವೇಳೆ ಹೇಳಿದ್ದೇನು?
ಹಲವು ಪ್ರಮುಖ ನಗರಗಳಲ್ಲಿ, ಅದರಲ್ಲೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಟ್ರಾಫಿಕ್ ಪೊಲೀಸರು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗಲೂ ಅವರನ್ನು ನಿಲ್ಲಿಸಿ ಮಾಸ್ಕ್ ಧರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಚಲನ್ ವಿಧಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಹೆಚ್ಚಾಗಿದ್ದವು. ಮಾಧ್ಯಮಗಳಲ್ಲಿ ಫೋಟೋಗಳೂ ಪ್ರಕಟವಾಗಿದ್ದವು. ಹೀಗಿರುವಾಗ ಆರೋಗ್ಯ ಇಲಾಖೆಯಿಂದ ಬಂದ ಸ್ಪಷ್ಟನೆ ಮಹತ್ವ ಎನಿಸಿದೆ. (ಏಜೆನ್ಸೀಸ್)