ನ್ಯೂಸ್

ಯೋಗೇಶ್​ ಗೌಡನನ್ನು ಹತ್ಯೆ ಮಾಡಿಸಿದ್ದು Vinay Kulkarni; ಕೋರ್ಟ್​ ಮುಂದೆ ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ

ಬೆಂಗಳೂರು: 2016ರಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲವನ್ನ ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ್​ ಕುಲಕರ್ಣಿ (Vinay Kulkarni) ಹೆಸರು ಕೇಳಿ ಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು, ವಿನಯ್​ ಕುಲಕರ್ಣಿ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಹೇಳಿಕೆ ದಾಖಲಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ವಿನಯ್​ ಕುಲಕರ್ಣಿ (Vinay Kulkarni) ಆಪ್ತ ಹೊಸ ಸಂಚಲವನ್ನ ಸೃಷ್ಟಿಸಿದ್ದು, ಈ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.

ವಿನಯ್​ ಕುಲಕರ್ಣಿ ಪಾತ್ರದ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿರುವ ಬಸವರಾಜ್​ ಮುತ್ತಗಿ, ಯೋಗೇಶ್​ ಗೌಡ ಹತ್ಯೆಗೆ ಸಂಬಂಧಿಸಿದಂತೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸದಿದ್ದಾಗ ಶಾಸಕ ವಿನಯ್ ಕುಲಕರ್ಣಿ​ ಸೂಚನೆ ಮೇರೆಗೆ ಬೆಂಗಳೂರಿನಿಂದ ಕರೆಸಿ ಸಂಚು ರೂಪಿಸಿ ಯೋಗೇಶ್​ ಗೌಡನನ್ನು ಹತ್ಯೆ ಮಾಡಿಸಲಾಯಿತು. ಯೋಗೇಶ್ ಗೌಡ ಧಾರವಾಡ ಜಿಪಂ ಸದಸ್ಯರಾಗಿದ್ದನ್ನು ಸಹಿಸದ ವಿನಯ್ ಕುಲಕರ್ಣಿ ದ್ವೇಷ ಸಾಧಿಸಲಾರಂಭಿಸಿದರು. ಈ ಕಾರಣಕ್ಕೆ ಹತ್ಯೆ ಮಾಡಿಸಲಾಯಿತು.

ಮೊದಲಿಗೆ ಧಾರವಾಡದ ಯುವಕರನ್ನು ಕರೆಸಿ ಮಾತನಾಡಲಾಯಿತು. ವಿನಯ್​ ಕುಲಕರ್ಣಿ ಅವರ ವಿಚಾರ ಪ್ರಸ್ತಾಪಿಸಿದಾಗ ಯಾರು ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಪ್ರಕರಣದ ಎಂಟನೇ ಆರೋಪಿ ದಿನೇಶ್​ನನ್ನು ಭೇಟಿ ಮಾಡಿ ಈ ವಿಚಾರ ತಿಳಿಸಲಾಯಿತು. ಎರಡು ದಿನಗಳ ಕಾಲಾವಕಾಶ ಪಡೆದ ದಿನೇಶ್​ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್​ ಕುಲಕರ್ಣಿಗೆ ತಲುಪಿಸಲಾಯಿತು.

ದಿನೇಶ್​​ ಷರತ್ತಿಗೆ ಒಪ್ಪಿಗೆ ಸೂಚಿಸಿದ ವಿನಯ್​ ಕುಲಕರ್ಣಿ ಹತ್ಯೆ ನಡೆದ ಬಳಿಕ ಧಾರವಾಡದ ಹುಡುಗರಿಗೆ ಶರಣಾಗಲು ಸೂಚಿಸುವ ಬಗ್ಗೆ ಹೇಳಿದ್ದರು. ಆ ಬಳಿಕ ಜೂನ್​ ಮೊದಲ ವಾರದಲ್ಲಿ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಸೇರಿದಂತೆ ಇತರರು ಧಾರವಾಡಕ್ಕೆ ಬಂದರು. ಆ ಬಳಿಕ ಅವರಿಗೆ ಕಂಟ್ರಿ ಪಿಸ್ತೂಲ್​ಗಳನ್ನು ನೀಡಲಾಗಿತ್ತು. ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ಎರಡು ಬಾರಿ ಹತ್ಯೆ ಯತ್ನ ನಡೆಯಿತು. ಎರಡು ಬಾರಿ ವಿಫಲವಾದ ಬಳಿಕ ಜೂನ್​ 15ರಂದು ಜಿಮ್​ನಲ್ಲಿ  ಯೋಗೇಶ್​ ಗೌಡನನ್ನು ಹತ್ಯೆ ಮಾಡಲಾಯಿತು ಎಂದು ಪ್ರಕರಣದ ಪ್ರಮುಖ ಆರೋಪಿ ಬಸವರಾಜ್​ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.