ನಾನು ತೆಳ್ಳಗಿದ್ದೇನೆ ಎಂದು ಬಹಳ ಮಂದಿ ಹೇಳುತ್ತಾರೆ. ದಪ್ಪವಾಗಲು ಯಾವ ಯೋಗ, ಆಹಾರ ತಿಳಿಸಿ. ಹೊಟ್ಟೆ ಹಸಿವೆ ಹೆಚ್ಚಾಗಲು ಏನು ಮಾಡಬೇಕು?
| ಕೆ. ನವೀನ್ ಕುಮಾರ್
ಇಲ್ಲಿ ಮುಖ್ಯವಾಗಿ ಆರೋಗ್ಯಕರ, ಉತ್ತಮವಾಗಿ ಕಾರ್ಯನಿರ್ವಹಿಸುವ ದೇಹದಲ್ಲಿ ಮನಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯವಾಗಿರಲು ಮತ್ತು ದೇಹದ ಬೇಕಾದ ತೂಕ ಹೆಚ್ಚಿಸಲು ಯೋಗವನ್ನು ಪ್ರಯತ್ನಿಸಬಹುದು. ತೂಕವನ್ನು ಪಡೆಯಲು ಬಯಸಿದರೆ ನಿಯಮಿತವಾಗಿ ಯೋಗಭಂಗಿಗಳನ್ನು ಅಭ್ಯಾಸ ಮಾಡಿ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಯ ಆಹಾರ ಸ್ವೀಕೃತಿ ಹೆಚ್ಚಿಸುತ್ತದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬಲಪಡಿಸುತ್ತದೆ. ಉತ್ತಮ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ನೀವು ತೂಕ ಹೆಚ್ಚಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಒಮ್ಮೆ ವೈದ್ಯರನ್ನು ಭೇಟಿಯಾಗಿ ಸಮಗ್ರ ಆರೋಗ್ಯದ ತಪಾಸಣೆ ಮಾಡಿಸಿ. ಆರಂಭದಲ್ಲಿ ಸರಳ ವ್ಯಾಯಾಮ, ಸೂರ್ಯ ನಮಸ್ಕಾರಗಳನ್ನು ಮಾಡಿ. ಆಹಾರ ಸೇವನೆ ಕ್ರಮವನ್ನು ಉತ್ತಮಪಡಿಸಿ ಪೋಷಕಾಂಶಗಳನ್ನು ಸೇವಿಸಿ.
ಸೂಚಿತ ಆಸನಗಳು: ತಾಡಾಸನ, ಪಾದಹಸ್ತಾಸನ, ವೀರಭದ್ರಾಸನ, ಪ್ರಸಾರಿತ ಪಾದೋತ್ಥಾನಾಸನ, ಪದ್ಮಾಸನ, ಶಶಾಂಕಾಸನ, ಸರ್ವಾಂಗಾಸನ, ವಿಪರೀತಕರಣೀ, ಅಧೋಮುಖ ಶ್ವಾನಾಸನ, ಮಕರಾಸನ, ಶವಾಸನ ಮಾಡಿ. ತಲಾ ಹತ್ತು ನಿಮಿಷದ ಪ್ರಾಣಾಯಾಮ, ಧ್ಯಾನ ಮಾಡಿ.
ಮುದ್ರೆಗಳು: ಪ್ರಾಣಮುದ್ರೆ ಹತ್ತು ನಿಮಿಷ, ಚಿನ್ಮುದ್ರೆ ಹತ್ತು ನಿಮಿಷ, ಪೃಥ್ವಿಮುದ್ರೆ 40 ನಿಮಿಷ (ತೂಕ ಹೆಚ್ಚಳಕ್ಕೆ) ಕೊನೆಯಲ್ಲಿ ಪುನಃ ಪ್ರಾಣಮುದ್ರೆ ಹತ್ತು ನಿಮಿಷ ಮಾಡಿ.
ಪೃಥ್ವಿಮುದ್ರೆಯನ್ನು ಮಾಡುವುದು ಹೇಗೆ? ಅದರಿಂದ ದೊರೆಯುವ ಪ್ರಯೋಜನಗಳು ಏನೇನು?
| ರಾಕೇಶ್ ಬೆಂಗಳೂರು
ಪೃಥ್ವಿಮುದ್ರೆ ದೇಹದಲ್ಲಿನ ಬೆಂಕಿ ಅಂಶವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಇದಕ್ಕೆ ಅಗ್ನಿ ಶಾಮಕ ಮುದ್ರೆ ಎಂಬ ಹೆಸರೂ ಇದೆ. ದೇಹದ ಬಲವನ್ನು ವೃದ್ಧಿಸಲು ಈ ಮುದ್ರೆ ಉಪಯುಕ್ತ. ಒಟ್ಟಿನಲ್ಲಿ ಶಾರೀರಿಕ ದೌರ್ಬಲ್ಯಗಳನ್ನು ನಿವಾರಿಸಲು ಈ ಮುದ್ರೆ ಸಹಕಾರಿ.
ವಿಧಾನ: ಹೆಬ್ಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ಜೋಡಿಸಿ. ಉಳಿದ ಬೆರಳುಗಳು ನೇರವಾಗಿರಲಿ. ಕೈಗಳು ಮೇಲ್ಮುಖವಾಗಿರಲಿ. ಈ ಮುದ್ರೆಯನ್ನು 15 ರಿಂದ 45 ನಿಮಿಷಗಳವರೆಗೆ ಮಾಡಬಹುದು.
ಪ್ರಯೋಜನ: ಶರೀರದ ಸರ್ವಾಂಗೀಣ ಬೆಳವಣಿಗೆಗೆ, ಅಂದರೆ ದೃಢಕಾಯಕ್ಕೆ ಹಾಗೂ ಜೀವನೋತ್ಸಾಹ ವೃದ್ಧಿಗೆ ಈ ಮುದ್ರೆ ನೆರವಾಗುತ್ತದೆ. ದೇಹ ಮತ್ತು ಮನಸ್ಸಿನ ದೌರ್ಬಲ್ಯವನ್ನು ಇದು ಗುಣಪಡಿಸುತ್ತದೆ. ಜ್ವರ ಇಳಿಸಲೂ ಸಹಾಯಕ. ರಕ್ತದೊತ್ತಡವನ್ನೂ ಸುಗಮಗೊಳಿಸುತ್ತದೆ. ಶರೀರಕ್ಕೆ ಹೊಸ ಚೈತನ್ಯ, ದೃಢತೆಯನ್ನು ನೀಡುತ್ತದೆ. ಕೋಪ ಶಮನಗೊಳಿಸಿ ಮನಕ್ಕೆ ನೆಮ್ಮದಿ ತಂದುಕೊಡುತ್ತದೆ. ಕೂದಲು ಉದುರುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕಾಲು ಒಡೆತ, ಒಣ ಚರ್ಮದ ಸಮಸ್ಯೆಯನ್ನು ದೂರಮಾಡುತ್ತದೆ.
ಸೂಚನೆ: ಕಫದ ಸಮಸ್ಯೆ ಇದ್ದವರು ತುಂಬಾ ಹೊತ್ತು ಇದನ್ನು ಅಭ್ಯಾಸ ಮಾಡಬಾರದು.