ಜೀವಗಳ ಉತ್ಪತ್ತಿಯನ್ನು ಶ್ರೀ ವಸಿಷ್ಠರು ಈ ಹಿಂದೆ ಹೇಳಿದ್ದಾರೆ. ಜೀವಗಳ ಉತ್ಪತ್ತಿ ಎಂದರೆ ಜೀವಗಳ ಆವಿರ್ಭಾವ. ಏಕೆಂದರೆ ಜೀವ ಅನಾದಿ. ಜೀವದ ಆವಿರ್ಭಾವವು ಪಂಚಮಹಾಭೂತಗಳ ಸೃಷ್ಟಿಗಿಂತ ಮೊದಲೇ ಆಗುತ್ತದೆ. ಜೀವದ ಉಪಾಧಿಯಾಗಿರುವ ಅಂತಃಕರಣದ ಆವಿರ್ಭಾವವೇ ಜೀವದ ಆವಿರ್ಭಾವ. ಹೀಗೆ ಆವಿರ್ಭವಿಸಿದ ಜೀವದ ಅಂತಃಕರಣದಿಂದಲೇ ಸ್ಥೂಲಶರೀರವು ವಿಕಾಸಗೊಳ್ಳುತ್ತದೆ. ಹಾಗೆ ವಿಕಾಸಗೊಳ್ಳುವಾಗ ಪಂಚಮಹಾಭೂತಗಳ ತನ್ಮಾತ್ರೆಗಳು ಸಹಕಾರಿಯಾಗುತ್ತವೆ. ಸೃಷ್ಟಿಯ ಪ್ರಕ್ರಿಯೆಯಲ್ಲಿ ಮುಂದೇನಾಗುತ್ತದೆ? ವಸಿಷ್ಠರು ಮುಂದಿನ ಪ್ರಕ್ರಿಯೆಯನ್ನು ಹೇಳುತ್ತಿದ್ದಾರೆ.
‘ಈ ಜಗತ್ತಿಗೆ ಪಂಚತನ್ಮಾತ್ರೆಗಳು ಬೀಜವಾದರೆ, ಅವುಗಳಿಗೆ ಆ ನಿತ್ಯವಾದ ಚೈತನ್ಯವೇ ಬೀಜ. ಯಾವುದೇ ವೃಕ್ಷದ ಬೀಜವೂ ಆ ವೃಕ್ಷದ ಹಣ್ಣಿನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಯಾವುದು ಆ ವೃಕ್ಷಕ್ಕೆ ಬೀಜವೋ, ಅದೇ ಬೀಜವೇ ಮತ್ತೆ ಹಣ್ಣಿನಲ್ಲಿ ಕಾಣಸಿಗುತ್ತದೆ. ಬೇರೆ ವೃಕ್ಷದ ಹಣ್ಣಿನಲ್ಲಿ ಇನ್ನೊಂದು ವೃಕ್ಷದ ಬೀಜವು ಎಂದೂ ಕಾಣಸಿಗದು. ಹಾಗೆಯೇ ಜಗತ್ತಿಗೆ ಬೀಜವಾಗಿರುವ ಪರಬ್ರಹ್ಮವು ಜಗತ್ತೆಂಬ ವೃಕ್ಷದಲ್ಲಿ ಇರುವ ಕಾರ್ಯವಸ್ತುಗಳೆಂಬ ಫಲದಲ್ಲಿ ಇದ್ದಿರುತ್ತದೆ. ಆದ್ದರಿಂದಲೇ ಈ ಜಗತ್ತೆಲ್ಲ ಬ್ರಹ್ಮಮಯವಾಗಿದೆ. ಸೃಷ್ಟಿಯ ಆದಿಯಲ್ಲಿ ತೋರಿಕೊಂಡ ಈ ಪಂಚತನ್ಮಾತ್ರೆಗಳು ಪರಮಾತ್ಮನ ಪ್ರಕೃತಿಯಾಗಿರುವ ಅವ್ಯಾಕೃತವೆಂಬ ಮಹಾಕಾಶದಲ್ಲಿ ನಿಂತಿರುತ್ತದೆ. ಹೇಗೆ ನಿಂತಿರುತ್ತದೆ? ಚಿಚ್ಛಕ್ತಿಯಿಂದ ಶರೀರ ಧರಿಸಿರುವಂತೆ ನಿಂತಿರುತ್ತದೆ. ಚಿಚ್ಛಕ್ತಿ ಎಂದರೆ ಮೊಟ್ಟಮೊದಲು ತನ್ನೊಳಗೆ ಚೈತ್ಯವನ್ನು ತೋರಿಸುವ ಚೈತನ್ಯಶಕ್ತಿ. (ಚೈತನ್ಯವೆಂದರೆ ಮಹಾಪ್ರಳಯದಲ್ಲಿ ತಾನೊಬ್ಬನೇ ಉಳಿದುಕೊಂಡ ಪರಬ್ರಹ್ಮಚೇತನದಲ್ಲಿ ತನ್ನನ್ನೇ ತಾನು ನೋಡಿಕೊಳ್ಳುವ ಒಂದು ಜ್ಞಾನ ಹುಟ್ಟಿಕೊಳ್ಳುತ್ತದೆ. ಆ ಜ್ಞಾನ ಬಂದಿದ್ದರಿಂದಲೇ ತಾನು ಲೋಕಗಳನ್ನು ಸೃಷ್ಟಿಸಬೇಕೆಂಬ ಒಂದು ಆಲೋಚನೆ ಆ ಪರಬ್ರಹ್ಮಚೇತನದಲ್ಲಿ ಹುಟ್ಟಿಕೊಳ್ಳುತ್ತದೆ. ಮುಂದೆ ಸೃಷ್ಟಿಯ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ತನ್ನನ್ನೇ ತಾನು ವಿಷಯೀಕರಿಸುವ ಜ್ಞಾನಕ್ಕೆ ವಿಷಯವಾಗಿರುವ ತನ್ನ ಒಂದು ಅಂಶವೇ ಚೇತ್ಯ. ಹೀಗೆ ತನ್ನೊಳಗೆ ಚೇತ್ಯವನ್ನು ತೋರಿಸುವ ಶಕ್ತಿಯೇ ಚೇತ್ಯದ ಪ್ರಥಮ ಶಕ್ತಿ. ಅದೇ ಪ್ರಕೃತದಲ್ಲಿ ಚಿಚ್ಛಕ್ತಿ.) ಐದು ತನ್ಮಾತ್ರೆಗಳ ಈ ಚಿಚ್ಛಕ್ತಿಯಿಂದಲೇ ಶರೀರ ಧರಿಸಿದಂತೆ ನಿಂತಿರುತ್ತದೆ. ಅಂದರೆ ಜೀವಚೇತನವು ಶರೀರವನ್ನು ಪ್ರವೇಶಿಸಿದಾಗ ಶರೀರವನ್ನು ಚೈತನ್ಯಮಯವನ್ನಾಗಿ ಮಾಡುವಂತೆ ಆ ಚಿಚ್ಛಕ್ತಿಯಿಂದ ಪ್ರವೇಶಿಸಲ್ಪಟ್ಟ ಪಂಚತನ್ಮಾತ್ರೆಗಳು ಚೈತನ್ಯಮಯವಾಗುತ್ತವೆ. ಹೀಗೆ ಚೈತನ್ಯಮಯ ಪಂಚತನ್ಮಾತ್ರೆಗಳು ಅವ್ಯಾಕೃತ ಆಕಾಶಗಳಲ್ಲಿ ನಿಂತಿರುತ್ತವೆ. ಹೇಗೆ ನಿಂತಿರುತ್ತವೆ? ಕಲ್ಪಿತವಾಗಿ ನಿಂತಿರುತ್ತವೆ. ವಾಸ್ತವಿಕವಾಗಿ ಅಲ್ಲ. ಆ ಅದ್ವಿತೀಯ ಪರಮಾತ್ಮಚೈತನ್ಯ ಒಂದನ್ನು ಬಿಟ್ಟರೆ ಉಳಿದೆಲ್ಲ ಕಲ್ಪಿತವೇ ಆದ್ದರಿಂದ ಪಂಚತನ್ಮಾತ್ರೆಗಳು ಕಲ್ಪಿತವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಮುಂದೆ ಇದೇ ಪಂಚತನ್ಮಾತ್ರೆಗಳ ಮೂಲಕವೇ ವೃದ್ಧಿ ಹೊಂದಿದ ಪರಬ್ರಹ್ಮಚೇತನವೇ ಈ ವಿಸ್ತಾರ ಜಗತ್ತನ್ನು ಸೃಷ್ಟಿಸುತ್ತದೆ. ಆದರೂ ಪಂಚತನ್ಮಾತ್ರೆಗಳು ಕಲ್ಪಿತವೇ ಆಗಿವೆ.’
‘ಪಂಚತನ್ಮಾತ್ರೆಗಳು ವಾಸ್ತವಗಳಲ್ಲ ಎಂಬುದನ್ನು ಇನ್ನಷ್ಟು ವಿವರಿಸಿ ಹೇಳಬಹುದು. ಉದಾಹರಣೆಗೆ ಆಕಾಶದಲ್ಲಿ ನೀಲಿ ಬಣ್ಣ ಇರುವಂತೆ ಕಾಣುತ್ತದೆ. ವಸ್ತುತಃ ಆಕಾಶಕ್ಕೆ ಯಾವ ಬಣ್ಣವೂ ಇಲ್ಲ. ನೀಲಿ ಬಣ್ಣ ಆಕಾಶದಲ್ಲಿ ಕಲ್ಪಿತ. ಆ ಕಲ್ಪನೆಗೆ ಆಧಾರ ಆಕಾಶ. ಆದ್ದರಿಂದ ಕಲ್ಪಿತ ಬಣ್ಣಕ್ಕೆ ಆಕಾಶವೇ ಅಧಿಷ್ಠಾನ. ಆಕಾಶದ ಇರುವಿಕೆಗಿಂತ ನೀಲಿಬಣ್ಣದ ಇರುವಿಕೆ ಬೇರೆಯಲ್ಲ. ಹಾಗೆಯೇ ಪರಬ್ರಹ್ಮದ ಅವ್ಯಾಕೃತ ಆಕಾಶದಲ್ಲಿ ತೋರಿಬರುತ್ತಿರುವ ಪಂಚತನ್ಮಾತ್ರೆಗಳು ಪರಬ್ರಹ್ಮದ ಇರುವಿಕೆಯಿಂದಲೇ ಅಸ್ತಿತ್ವವನ್ನು ಪಡೆದಿವೆ. ಅವುಗಳಿಗೆ ಸ್ವತಂತ್ರ ಇರುವಿಕೆ ಇಲ್ಲ. ಪರಬ್ರಹ್ಮದ ಇರುವಿಕೆಯಿಂದಲೇ ಪಂಚತನ್ಮಾತ್ರೆಗಳು ಸನ್ಮಯ ಎನಿಸಿಕೊಳ್ಳುತ್ತವೆ. ಏಕೆಂದರೆ ಒಂದು ಸಿದ್ಧವಸ್ತುವಿನಿಂದ ಇನ್ನೊಂದು ವಸ್ತು ಸಿದ್ಧ ಎನಿಸಿಕೊಳ್ಳುತ್ತದೆಯೇ ವಿನಾ ಅಸಿದ್ಧ ವಸ್ತುವಿನಿಂದ ಇನ್ನೊಂದು ವಸ್ತು ಸಿದ್ಧ ಎನಿಸಿಕೊಳ್ಳುವುದಿಲ್ಲ. (ಇಲ್ಲಿ ಬ್ರಹ್ಮವೇ ಸಿದ್ಧವಸ್ತು. ಏಕೆಂದರೆ ಅದು ಮೊದಲೇ ಇರುವ ವಸ್ತು. ಸಿದ್ಧ ಎನಿಸಿಕೊಳ್ಳಲು ಹೊರಟಿರುವ ಇನ್ನೊಂದು ವಸ್ತು ಪಂಚತನ್ಮಾತ್ರೆಗಳ ಸಮೂಹ. ಪಂಚತನ್ಮಾತ್ರೆಗಳ ಸಮೂಹವು ಮೊದಲೇ ಇದ್ದ ಬ್ರಹ್ಮದಿಂದಲೇ ಇರುವಿಕೆಯನ್ನು ಪಡೆಯುತ್ತದೆ. ಮೊದಲು ಇಲ್ಲದ ವಸ್ತುವಿನಿಂದ ಪಂಚತನ್ಮಾತ್ರೆಗಳ ಸಮೂಹ ಇರುವಿಕೆಯನ್ನು ಪಡೆಯಲು ಸಾಧ್ಯವಿಲ್ಲ. ಮೊದಲೇ ಇರುವ ವಸ್ತು ಈಗ ಹುಟ್ಟಿಕೊಳ್ಳುತ್ತಿರುವ ವಸ್ತುವಿಗೆ ಆಧಾರವಾಗಿರುತ್ತದೆ. ಆದ್ದರಿಂದ ಪಂಚತನ್ಮಾತ್ರೆಗಳ ಸಮೂಹಕ್ಕೆ ಪರಬ್ರಹ್ಮವೇ ಆಧಾರ. ಪರಬ್ರಹ್ಮದ ಇರುವಿಕೆಯಿಂದಲೇ ಪಂಚತನ್ಮಾತ್ರೆಗಳ ಸಮೂಹ ಇರುವಿಕೆಯನ್ನು ಪಡೆದಿದೆ. ಸ್ವತಃ ಇರುವಿಕೆಯಿಂದ ಪಂಚತನ್ಮಾತ್ರೆಗಳ ಸಮೂಹವು ಇರುವಿಕೆಯನ್ನು ಪಡೆದಿಲ್ಲ.) ಯಾವುದು ವಿಕಲ್ಪದ ಮೂಲಕ (ಕಲ್ಪನೆಯ ಮೂಲಕ) ಅಸ್ತಿತ್ವವನ್ನು ಪಡೆದುಕೊಂಡಿದೆಯೋ, ಅದು ಹೇಗೆ ಸತ್ಯವಾದೀತು?’