ನ್ಯೂಸ್

ಯೋಗ ವಾಸಿಷ್ಟ; ಸಮಷ್ಟಿ ಜೀವನಿಂದ ವ್ಯಷ್ಟಿ ಜೀವಗಳು

ಶ್ರೀ ವಸಿಷ್ಠರು ಹಿಂದೆ ಜೀವಾತ್ಮನ ಉದಯವನ್ನು ವಿವರಿಸಿದ್ದಾರೆ. ಸಮಷ್ಟಿ ಜೀವನ ಉದಯ ಅದು. ಈಗ ಅವನಿಂದಲೇ ವ್ಯಷ್ಟಿ ಜೀವಗಳ ಉದಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾರೆ. ನಾವೆಲ್ಲ ವ್ಯಷ್ಟಿಜೀವಗಳು. ಸಮಷ್ಟಿಜೀವನಿಂದ ವ್ಯಷ್ಟಿಜೀವನ ಉದಯದಿಂದ ಪ್ರಾರಂಭಿಸಿ ಸ್ಥೂಲ ಶರೀರವನ್ನು ಧರಿಸುವ ಹಂತದವರೆಗೆ ಹೇಳಬೇಕೆಂಬುದು ವಸಿಷ್ಠರ ಅಭಿಪ್ರಾಯ. ಸಮಷ್ಟಿ ಜೀವಭಾವ ಬರಲು ‘ಸಾಮಾನ್ಯಾಭಿಮಾನ’ ಕಾರಣವಾದರೆ; ವ್ಯಷ್ಟಿ ಜೀವಭಾವ ಬರಲು ‘ವಿಶೇಷಾಭಿಮಾನ’ ಕಾರಣ.

‘ಸಾಮಾನ್ಯಾಭಿಮಾನ’ವೆಂದರೆ ಮುಂದೆ ಉದಯಿಸಲಿರುವ ಎಲ್ಲ ಜೀವಗಳಿಗೂ ಸಾಮಾನ್ಯವಾಗಿರುವ ಉಪಾಧಿಗಳಾದ ಅವ್ಯಕ್ತ, ಮಹತ್ ತತ್ವ, ಅಹಂಕಾರ ತತ್ವ ಮುಂತಾದವುಗಳನ್ನು ಕುರಿತ ಅಭಿಮಾನ. ಇದು ಸಮಷ್ಟಿ ಜೀವ ಅಥವಾ ಹಿರಣ್ಯ ಗರ್ಭನಿಗೆ ಮಾತ್ರವೇ ಇರುತ್ತದೆ. ‘ವಿಶೇಷಾಭಿಮಾನ’ವೆಂದರೆ ಒಂದೊಂದೇ ಜೀವದಲ್ಲಿರುವ, ವಿಶಿಷ್ಟ ವಾಸನೆಗಳಿಂದ ಕೂಡಿರುವ, ಅಂತಃಕರಣವೆಂಬ ಉಪಾಧಿಯನ್ನು ಕುರಿತಾದ ಅಭಿಮಾನ. ಅಭಿಮಾನವೆಂದರೆ ‘ಇದೇ ತಾನು’ ಎಂಬ ಭಾವ. ಈ ಹಿಂದೆ ಸಾಮಾನ್ಯ ಅಭಿಮಾನವಿರುವ ಸಮಷ್ಟಿಜೀವದ ಉದಯವನ್ನು ಹೇಳಿದ್ದಾರೆ. ಈಗ ಆ ಸಮಷ್ಟಿ ಜೀವದಿಂದಲೇ ವ್ಯಷ್ಟಿ ಜೀವಗಳ ಉದಯವನ್ನು ಹೇಳುತ್ತಿದ್ದಾರೆ.

‘ಶ್ರೀರಾಮ! ಜೀವಾಕಾಶನು ವ್ಯಷ್ಟಿ ಶರೀರವನ್ನು ಹೇಗೆ ಪಡೆಯುತ್ತಾನೆಂದು ಹೇಳುತ್ತೇನೆ. ಅಂತಃಕರಣಾಭಿಮಾನಿಯೇ ವ್ಯಷ್ಟಿ ಜೀವ. ಆದ್ದರಿಂದ ವ್ಯಷ್ಟಿಜೀವಗಳ ಉದಯವಾಗಲು ಅಂತಃಕರಣ ಸೃಷ್ಟಿಯಾಗಬೇಕಾಗುತ್ತದೆ. ಅಂತಃಕರಣದ ಮೂಲವಸ್ತು ಸಮಷ್ಟಿ ಜೀವನ ಉಪಾಧಿಯಾಗಿರುವ ಅವ್ಯಕ್ತ-ಮಹತ್-ಅಹಂಕಾರ-ಪಂಚತನ್ಮಾತ್ರೆಗಳೇ ಆಗಿವೆ. ಸಮಷ್ಟಿ ಜೀವನಾದ ಹಿರಣ್ಯಗರ್ಭನ ಭಾವನೆಯಿಂದಲೇ ವ್ಯಷ್ಟಿ ಅಂತಃಕರಣಗಳು ಅಂಕುರಗೊಳ್ಳುತ್ತವೆ. ಆ ಹಿರಣ್ಯಗರ್ಭನು ಆದಿಕರ್ತನಾದ ಪರಮೇಶ್ವರನಲ್ಲೇ ತೋರಿಕೊಂಡವನು.

ಆದ್ದರಿಂದ ಹಿರಣ್ಯಗರ್ಭನ ಶರೀರವು ಆಕಾಶದಂತೆ ವ್ಯಾಪಕವಾಗಿದೆ. ಆದರೂ ಅವನು ತನ್ನನ್ನು ‘ಅಣುವಿನಂತಹ ತೇಜಃಕಣ ತಾನಾಗಿದ್ದೇನೆ’ ಎಂದು ಭಾವಿಸಿಕೊಳ್ಳುತ್ತಾನೆ. ಹಾಗೆ ಭಾವಿಸಿಕೊಂಡಿದ್ದರಿಂದಲೇ ಸಣ್ಣ ಸಣ್ಣ ತೇಜಃಕಣಗಳಾಗಿರುವ ಜೀವಗಳ ಸೃಷ್ಟಿಯಾಗುತ್ತದೆ. ಹೀಗೆ ಭಾವಿಸಲ್ಪಟ್ಟ ಜೀವಗಳನ್ನು ಕುರಿತಾಗಿ ‘ಈ ಜೀವಗಳು ವೃದ್ಧಿ ಹೊಂದಲಿ’ ಎಂಬುದಾಗಿ ಭಾವಿಸುತ್ತಾನೆ. ಆಕಾಶದಂತಿರುವ ತನ್ನ ಶರೀರದಲ್ಲೇ ಇದೆಲ್ಲ ಭಾವನೆಗಳನ್ನು ಮಾಡಿಕೊಳ್ಳುತ್ತಾನೆ.’

‘ಇಲ್ಲದ ಎರಡನೇ ಚಂದ್ರನನ್ನು ಭಾವಿಸಿಕೊಂಡಿದ್ದರಿಂದ ಎರಡನೇ ಚಂದ್ರ ಇದ್ದವನಾಗಿ ಭಾಸವಾಗುವಂತೆ, ಈ ಜೀವಗಳು ಅವನಿಗಿಂತ ಬೇರೆಯಾಗಿಲ್ಲದಿದ್ದರೂ ಬೇರೆಯಾಗಿರುವಂತೆ ಭಾಸವಾಗುತ್ತವೆ. ಹೀಗೆ ತನ್ನಲ್ಲೇ ಭಾಸವಾಗುತ್ತಿರುವ ಜೀವಗಳನ್ನೇ ಅವನು ಭಾವನೆ ಮಾಡಿಕೊಳ್ಳುವುದನ್ನು ಮುಂದುವರಿಸಿರುವುದರಿಂದ ಆ ಭಾವನೆಗೆ ಅವನೇ ದ್ರಷ್ಟಾ (ನೋಡುವವ), ಅವನೇ ದೃಶ್ಯ (ನೋಡಲ್ಪಡುವ ವಿಷಯ). ಸ್ವಪ್ನದಲ್ಲಿ ತನ್ನನ್ನೇ ತಾನು ನೋಡಿಕೊಳ್ಳುವುದುಂಟು. ತಾನು ಸತ್ತಿರುವುದನ್ನು ನೋಡುವುದುಂಟು.

ಆಗ ಅಲ್ಲಿ ತಾನೇ ನೋಡುವವ, ತಾನೇ ನೋಡಲ್ಪಡುವ ವಿಷಯ ಎರಡೂ ಆಗುತ್ತಾನೆ. ಹಾಗೆಯೇ ಆ ಹಿರಣ್ಯಗರ್ಭನು ತನ್ನಿಂದಲೇ ಬೇರೆಯಾಗಿ ತೋರುತ್ತಿರುವ ಆ ಜೀವಗಳನ್ನು ಭಾವಿಸಿಕೊಳ್ಳುತ್ತಾನೆ. ಹೀಗೆ ಭಾವಿಸಿಕೊಂಡಿದ್ದರಿಂದ ಕಣಗಳಂತಿದ್ದ ಆ ಜೀವಗಳು ಸ್ವಲ್ಪ ಸ್ಥೂಲವಾಗುತ್ತವೆ. ಅಂದರೆ ಸೂಕ್ಷ್ಮಭೂತಗಳಾದ ಪಂಚತನ್ಮಾತ್ರೆಗಳ ಸೇರ್ಪಡೆಯಿಂದ ಆ ಜೀವಗಳ ಸೂಕ್ಷ್ಮಶರೀರಗಳು ಉಂಟಾಗುತ್ತವೆ. ಈ ಸೂಕ್ಷ್ಮಶರೀರಗಳನ್ನೇ ಲಿಂಗಶರೀರಗಳೆಂದು ಕರೆಯುತ್ತಾರೆ.’

‘ಆ ಹಿರಣ್ಯಗರ್ಭನು ಹೀಗೆ ಭಾವನೆಗಳನ್ನು ಮಾಡಿದ್ದರಿಂದ ತೇಜಃಕಣಗಳ ಆಕಾರಗಳನ್ನೇ ಪಡೆಯುತ್ತಾನೆ. ಅದಕ್ಕೆ ಎರಡು ಕಾರಣಗಳಿವೆ. ಅವನು ಹೇಗೆ ಭಾವನೆ ಮಾಡಿಕೊಂಡಿದ್ದಾನೋ ಹಾಗೆಯೇ ಪಂಚತನ್ಮಾತ್ರೆಗಳು ಸೇರಿಕೊಂಡು ವ್ಯಷ್ಟಿ ಜೀವಗಳ ಸೂಕ್ಷ್ಮಶರೀರಗಳನ್ನು ಉಂಟು ಮಾಡಿದ್ದು ಒಂದು ಕಾರಣವಾದರೆ, ಅವನೇ ವಿಶ್ವರೂಪಿಯಾಗಿದ್ದದ್ದು ಇನ್ನೊಂದು ಕಾರಣ. ತೇಜಃಕಣಗಳ ಆಕಾರದಲ್ಲಿದ್ದ ಅವನು ‘ಅವನೇ ತಾನು’ ಎಂಬ ಭಾವದಲ್ಲಿದ್ದಾನೆ.’

‘ಆ ಹಿರಣ್ಯಗರ್ಭನ ಚಿತ್ತದಿಂದಲೇ ವ್ಯಷ್ಟಿ ಜೀವಗಳ ಸೂಕ್ಷ್ಮಶರೀರ ಮತ್ತು ಮುಂದೆ ಬರಲಿಕ್ಕಿರುವ ಸ್ಥೂಲ ಶರೀರಗಳೆರಡೂ ಉಂಟಾಗುತ್ತವೆ. ಸೂಕ್ಷ್ಮಶರೀರವೆಂದರೆ ನಕ್ಷತ್ರದಂತಿರುವ ತೇಜಃಕಣದ ಆಕಾರ. ಸ್ಥೂಲಶರೀರವೆಂದರೆ ನಾವೀಗ ಪಡೆದುಕೊಂಡಿರುವ ಸ್ಥೂಲ ಮಹಾಭೂತಗಳ ಶರೀರ. ಇವೆರಡಕ್ಕೂ ಅವನ ಚಿತ್ತದ ಸಂಕಲ್ಪವೇ ಮೂಲ. ವಸ್ತುತಃ ಮಲಗಿರುವ ತನ್ನನ್ನೇ ಸ್ವಪ್ನದಲ್ಲಿ, ದಾರಿಯಲ್ಲಿ ಹೋಗುವವನನ್ನಾಗಿ ಸಂಕಲ್ಪಿಸಿದಂತೆ ಅವನ ಚಿತ್ತವೇ ಸೂಕ್ಷ್ಮಶರೀರ-ಸ್ಥೂಲ ಶರೀರಗಳೆರಡನ್ನೂ ಸಂಕಲ್ಪಿಸುತ್ತವೆ.’

‘ಕಲ್ಪನಾಲೋಕದಲ್ಲಿ ಮುಳುಗಿರುವವನು ತನ್ನ ಚಿತ್ತವನ್ನೇ ವಿಷಯವನ್ನಾಗಿ ಮಾಡಿಕೊಳ್ಳುತ್ತಾನೆ. ಹಾಗೆಯೇ ಹಿರಣ್ಯಗರ್ಭನು ತನ್ನ ಶರೀರವನ್ನೇ ಬೇರೆ ಬೇರೆ ಜೀವಗಳ ಸೂಕ್ಷ್ಮಶರೀರಗಳನ್ನಾಗಿ ಮಾಡಿಕೊಂಡು ಆ ಸೂಕ್ಷ್ಮಶರೀರಗಳಿಗೇ ತಾನು ಸೀಮಿತ ಎಂದು ಭಾವಿಸಿಕೊಳ್ಳುತ್ತಾನೆ. ಸೂಕ್ಷ್ಮಶರೀರವೆಂಬ ಉಪಾಧಿಗಿಂತ

ಹೊರಗೂ ತಾನಿದ್ದರೂ ಆ ತೇಜಃಕಣದ ಆಕಾರದಲ್ಲಿರುವ ಆ ಸೂಕ್ಷ್ಮಶರೀರವಷ್ಟೇ ತನ್ನ ಸ್ವರೂಪವೆಂಬಂತೆ ಭಾವಿಸಿಕೊಳ್ಳುತ್ತಾನೆ. ದೊಡ್ಡ ಪರ್ವತ ಚಿಕ್ಕ ಕನ್ನಡಿಯಲ್ಲಿ ಪ್ರತಿಬಿಂಬಿತವಾಗುವಂತೆಯೇ ಇದು. ಅಥವಾ ಎಲ್ಲ ಕಡೆ ಓಡಾಡುವ ಸಾಮರ್ಥ್ಯವುಳ್ಳ ಶರೀರವಿದ್ದರೂ ಒಂದು ಬಾವಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿರುವ ಕಪ್ಪೆಯಂತೆ. ಧ್ವನಿಯೆತ್ತಿ ಮಾತನಾಡಿದರೆ ಎಲ್ಲರಿಗೂ ಕೇಳಿಸುವಂತೆ ಮಾಡಬಹುದಾಗಿದ್ದರೂ ಬಾಯಿಯನ್ನು ಕೈಯಿಂದ ಮುಚ್ಚಿಕೊಂಡು ಮಾತನಾಡಿದಂತೆಯೇ ಇದು.’