ನ್ಯೂಸ್

ಯೋಗ ವಾಸಿಷ್ಟ; ಜಗತ್ತೆಲ್ಲವೂ ಚಿನ್ಮಾತ್ರ (3-12-29 ರಿಂದ 32)

ಸೃಷ್ಟಿಯ ಆಖ್ಯಾಯಿಕೆಯಲ್ಲಿ ಪ್ರತ್ಯೇಕವಾಗಿ ಪಂಚಮಹಾಭೂತಗಳ ಸೃಷ್ಟಿ ಮತ್ತು ಆ ಪಂಚಮಹಾಭೂತಗಳೆಲ್ಲ ಒಟ್ಟಿಗೆ ಸೇರಿ ಬ್ರಹ್ಮಾಂಡದ ಸೃಷ್ಟಿಯನ್ನು ಈ ಹಿಂದೆ ಹೇಳಿದ್ದಾರೆ. ಸೂಕ್ಷ್ಮವಾದ ಪಂಚತನ್ಮಾತ್ರೆಗಳಿಂದ ಸ್ಥೂಲವಾದ ಈ ಬ್ರಹ್ಮಾಂಡ ಹುಟ್ಟಿದೆ. ಆ ಅರ್ಥದಲ್ಲಿ ಸೂಕ್ಷ್ಮ ತನ್ಮಾತ್ರೆಗಳಲ್ಲಿಯೇ ಸ್ಥೂಲ ಜಗತ್ತಿದೆ. ಸೂಕ್ಷ್ಮವೇ ಸ್ಥೂಲ ಜಗತ್ತಿಗೆ ಆಧಾರ. ಇದು ಹೇಗೆಂಬ ಪ್ರಶ್ನೆಗೆ ‘ವಿವರ್ತವಾದ’ವೇ ಉತ್ತರ.

ಸ್ವಪ್ನದಲ್ಲಿ ಮನಸ್ಸು ಸೂಕ್ಷ್ಮ ನಾಡಿಗಳ ಒಳಗಿರುತ್ತದೆ. ಅಲ್ಲಿದ್ದುಕೊಂಡೇ ವಿಸ್ತಾರವಾದ ಪ್ರದೇಶದ ಅನುಭವವನ್ನುಂಟುಮಾಡುತ್ತದೆ. ಸ್ವಪ್ನದಲ್ಲಿ ಕಂಡ ವಿಸ್ತಾರವಾದ ಪ್ರದೇಶಕ್ಕೆ ಸೂಕ್ಷ್ಮ ನಾಡಿಯ ಒಳಗೆ ಇರುವ ಸೂಕ್ಷ್ಮ ಮನಸ್ಸೇ ಆಧಾರ. ಹಾಗೆಯೇ ತೋರಿಕೆಯಾದ ವಿಸ್ತಾರವಾದ ಸ್ಥೂಲ ಜಗತ್ತು ಸೂಕ್ಷ್ಮತನ್ಮಾತ್ರೆಗಳಲ್ಲಿ ನಿಂತಿದೆ. ವಿವರ್ತವಾದದ ಇನ್ನೊಂದು ಅಂಶವೇನೆಂದರೆ ಕಾರಣದಲ್ಲಿ ಬದಲಾವಣೆ ಆಗದಿರುವುದು. ಸಿನಿಮಾ ಪರದೆಯ ಮೇಲೆ ಅನೇಕ ದೃಶ್ಯಾವಳಿಗಳು ಬಂದುಹೋದರೂ ಆ ಪರದೆಯಲ್ಲಿ ಬದಲಾವಣೆ ಆಗದು. ಹಗ್ಗದಲ್ಲಿ ಹಾವಿನ ಅನುಭವವಾದ ಮಾತ್ರಕ್ಕೆ ವಸ್ತುತಃ ಆ ಹಗ್ಗದಲ್ಲಿ ಯಾವುದೇ ಬದಲಾವಣೆ ಆಗದು.

ಶ್ರೀ ವಸಿಷ್ಠರು ಈ ಅಂಶವನ್ನಿಟ್ಟುಕೊಂಡು ಇನ್ನೊಂದು ಸಂಗತಿಯನ್ನು ಹೇಳುತ್ತಿದ್ದಾರೆ. ಹಿಂದೆ ಅವರು ‘ಕ್ಷಣಾತ್ ಕಲ್ಪೀಭವಂತಿ ಚ’ ಎಂದಿದ್ದರು. ಅಂದರೆ ಪರಮಾಣುವಿನಂತೆ ಸೂಕ್ಷ್ಮವಾಗಿರುವ ತನ್ಮಾತ್ರೆಗಳಲ್ಲಿ ಒಂದು ಕ್ಷಣದಲ್ಲಿ ಕಲ್ಪದಷ್ಟು ವಿಸ್ತಾರವಾದ ಬ್ರಹ್ಮಾಂಡ ತೋರಿಕೊಳ್ಳುತ್ತದೆ. ಈಗ ಅದೇ ರೀತಿಯ ಇನ್ನೊಂದು ಮಾತನ್ನು ಹೇಳುತ್ತಿದ್ದಾರೆ. ‘ಕ್ಷಣಾತ್ ಪಿಂಡೀಭವಂತಿ ಚ’ ಪಿಂಡೀಭಾವವೆಂದರೆ ಸೂಕ್ಷ್ಮಕಣಗಳು ಸೇರಿ ಸ್ಥೂಲವಸ್ತುಗಳಾಗಿ ಬೆಳವಣಿಗೆ ಹೊಂದುವುದು. ಕಾರ್ಯವು ಕಾರಣದ ವಿವರ್ತವಾದ್ದರಿಂದ ಪಿಂಡೀಭಾವಕ್ಕೆ ಒಂದು ಕ್ಷಣ ಸಾಕಾಗುತ್ತದೆ. ಕಾರ್ಯವು ಕಾರಣದ ವಿವರ್ತವಾಗಿದೆ ಎಂಬುದೇ ವಿವರ್ತವಾದ. ಕಾರಣದಲ್ಲಿ ಕಾರ್ಯವು ತೋರಿಕೊಳ್ಳುವುದೇ ವಿವರ್ತ. ವಿವರ್ತವನ್ನೇ ಇಲ್ಲಿ ವಸಿಷ್ಠರು ನೇರ ಶಬ್ದಗಳಿಂದ ಹೇಳುತ್ತಿದ್ದಾರೆ:

‘ಶ್ರೀರಾಮ! ಪಂಚತನ್ಮಾತ್ರೆಗಳು ಹಿಂದೆ ಹೇಳಿದಂತೆ ಸ್ಥೂಲಭಾವವನ್ನು ಹೊಂದಿದರೂ ಅವುಗಳ ಸೂಕ್ಷ್ಮಸ್ವರೂಪಕ್ಕೆ ಯಾವುದೇ ಭಂಗವಿಲ್ಲ. ಏಕೆಂದರೆ ಇಲ್ಲಿ ಹೇಳುವ ಸ್ಥೂಲ ಭಾವವು ‘ವಿವರ್ತ’ವಾದ್ದರಿಂದ ಅದು ತನ್ನ ಕಾರಣದಲ್ಲಿ ಬದಲಾವಣೆಯನ್ನುಂಟುಮಾಡುವುದಿಲ್ಲ. ಸೃಷ್ಟಿಕಾಲದಲ್ಲಿ ಎಲ್ಲ ತನ್ಮಾತ್ರೆಗಳೂ ವಿವರ್ತವನ್ನೇ ಅನುಸರಿಸುತ್ತವೆ. ಆದರೂ ಅವು ವಸ್ತುತಃ ನಿರ್ವಿವರ್ತಸ್ವರೂಪದಲ್ಲಿ ನಿಂತಿರುತ್ತವೆ. ಅಂದರೆ ತನ್ಮಾತ್ರೆಗಳಲ್ಲಿ ಸ್ಥೂಲ ಜಗತ್ತು ತೋರುತ್ತಿರುವಾಗಲೂ ಅವು ತಮ್ಮ ನಿಜಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಆ ಪರಮಾತ್ಮಚೈತನ್ಯದಲ್ಲಿ ಅವು ನಿಂತಿರುವುದೇ ಇದಕ್ಕೆ ಕಾರಣ.

ಸೂತ್ರದಲ್ಲಿ ಮಣಿಗಳು ಪೋಣಿಸಲ್ಪಡುವಂತೆ, ಪರಮತ್ಮಚೈತನ್ಯದಲ್ಲಿಯೇ ಆ ಪಂಚತನ್ಮಾತ್ರೆಗಳು ಪೋಣಿಸಲ್ಪಟ್ಟಿವೆ. ಆ ಪರಮಾತ್ಮಚೈತನ್ಯ ಎಂದೂ ಬದಲಾಗುವುದಿಲ್ಲ. ಬದಲಾಗದ ಪರಮಾತ್ಮತತ್ತ್ವದಲ್ಲಿ ನಿಂತಿದ್ದರಿಂದಲೇ ಅವು ನೈಜ ಬದಲಾವಣೆಗೆ ಒಳಗಾಗುವುದಿಲ್ಲ. ಪರಮಾತ್ಮಚೈತನ್ಯದಿಂದ ಹೀಗೆ ಕೂಡಿಕೊಂಡಿರುವುದರಿಂದಲೇ (ಅನುವಿದ್ಧವಾಗಿರುವುದರಿಂದಲೇ) ಒಂದೇ ಕ್ಷಣದಲ್ಲಿಯೇ ಅವು ಬೆಳೆದುನಿಲ್ಲುತ್ತವೆ. (ವಿವರ್ತವಾದವನ್ನು ಅನುಸರಿಸಿದಾಗ ಮಾತ್ರ ಹೀಗಾಗಲು ಸಾಧ್ಯ.)’

‘ಸಂಗ್ರಹವಾಗಿ ಹೇಳುವುದಾದರೆ ಆ ಸಂಕಲ್ಪಾತ್ಮಕ ಚೈತನ್ಯವೇ ತನ್ನ ಸಂಕಲ್ಪದ ಮೂಲಕ ಈ ಎಲ್ಲ ತನ್ಮಾತ್ರೆಗಳಾಗಿ ತೋರಿಕೊಂಡಿದೆ. ಆ ಚೈತನ್ಯವು ವಸ್ತುತಃ ನಿರಾಕಾರವಾಗಿದ್ದರೂ ತನ್ನ ಜ್ಞಾನದಿಂದಲೇ ‘ತ್ರಸರೇಣು’ವಿನಂತೆ ಸೂಕ್ಷ್ಮರೂಪವನ್ನು ಧರಿಸಿಕೊಂಡು ಎಲ್ಲವನ್ನೂ ನೋಡುತ್ತದೆ.’ (‘ತ್ರಸರೇಣು’ ಎಂಬ ಶಬ್ದವು ‘ನ್ಯಾಯಶಾಸ್ತ್ರ’ದಲ್ಲಿ ಬಳಕೆಯಾಗಿದೆ. ನ್ಯಾಯಶಾಸ್ತ್ರದ ಪ್ರಕಾರ ಎರಡು ಪರಮಾಣುಗಳು ಸೇರಿದರೆ ‘ದ್ವ ್ಯುಕ’ ಎಂದೂ, ಮೂರು ದ್ವ ್ಯುಕಗಳು ಸೇರಿದರೆ ಒಂದು ‘ತ್ರ್ಯುಕ’ ಎಂದೂ ಹೇಳಲ್ಪಡುತ್ತದೆ. ಈ ತ್ರ್ಯುಕವನ್ನೇ ‘ತ್ರಸರೇಣು’ ಎಂದೂ ಕರೆಯುತ್ತಾರೆ. ಅಂದರೆ ಆರು ಪರಮಾಣುಗಳ ಗುಂಪು.)

‘ಶ್ರೀರಾಮ! ಒಟ್ಟಾರೆ ಈ ಜಗತ್ತಿನಲ್ಲಿರುವ ಎಲ್ಲದಕ್ಕೂ (ಎಲ್ಲ ಅಚೇತನಗಳಿಗೂ) ಈ ಐದು ತನ್ಮಾತ್ರೆಗಳೇ (ಆಕಾಶತನ್ಮಾತ್ರೆ, ವಾಯುತನ್ಮಾತ್ರೆ, ತೇಜಸ್ತನ್ಮಾತ್ಮೆ, ಜಲತನ್ಮಾತ್ರೆ, ಪೃಥಿವೀತನ್ಮಾತ್ರೆ) ಕಾರಣ. ಅಂದರೆ ಇವೆಲ್ಲ ಪಂಚತನ್ಮಾತ್ರೆಗಳಿಗಿಂತ ಬೇರೆಯಲ್ಲ. ಪರಮಾತ್ಮನಿಗೆ ಅತ್ಯಂತ ಸಮೀಪದಲ್ಲಿರುವ ಮಾಯಾಶಕ್ತಿಯೇ ಆ ಪಂಚತನ್ಮಾತ್ರೆಗಳಿಗೆ ಕಾರಣ. ಆದ್ದರಿಂದ ಪಂಚತನ್ಮಾತ್ರೆಗಳಿಗೆ ಆ ಮಾಯಾಶಕ್ತಿಗಿಂತ ಬೇರೆ ಅಸ್ತಿತ್ವವಿಲ್ಲ.

ಆ ಮಾಯಾಶಕ್ತಿಯಾದರೋ ಪರಮಾತ್ಮನಿಗಿಂತ ಬೇರೆಯಲ್ಲ. ಪರಮಾತ್ಮಜ್ಞಾನದಿಂದ ಈ ಮಾಯಾಶಕ್ತಿಯನ್ನು ದಾಟಿದರೆ ಪರಮಾತ್ಮನೊಬ್ಬನೇ ಉಳಿದುಕೊಳ್ಳುತ್ತಾನೆ. ಅವನೇ ನಿಜವಾದ ಮೂಲಬೀಜ ಎಂಬ ಅನುಭವ ಬಂದರೆ - ಈ ಜಗತ್ತೆಲ್ಲ ಆ ಚಿನ್ಮಾತ್ರವೇ ಆಗಿದೆ, ಈ ಜಗತ್ತಿನ ಅದ್ಭುತ ಸೌಂದರ್ಯಗಳೆಲ್ಲವೂ ಅವನೇ ಎಂಬುದು ಸಿದ್ಧವಾಗುತ್ತದೆ. ಈ ಜಗತ್ತೆಲ್ಲ ಜಗದುತ್ಪತ್ತಿಯ ಆದಿಯಲ್ಲಿರುವ, ಸ್ವತಃ ಆದಿಯಿಲ್ಲದ (ಜನ್ಮವಿಲ್ಲದ) ಆ ಚಿನ್ಮಾತ್ರವೇ ಹೌದು.’