ಶಿವಮೊಗ್ಗ: ಜೀವನದಲ್ಲಿ ಮಾನಸಿಕ ಸದೃಢತೆಗೆ ಯೋಗಾಭ್ಯಾಸ ಬಹಳ ಮುಖ್ಯ. ಭಾರತ ಯೋಗದ ಕೇಂದ್ರ ಬಿಂದುವಾಗಿದ್ದು ಇಡೀ ಜಗತ್ತಿಗೆ ಯೋಗದ ಮಹತ್ವ ಸಾರುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ಕಮಲಾ ನೆಹರು ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗವು ಶನಿವಾರ ಏರ್ಪಡಿಸಿದ್ದ ಕುವೆಂಪು ವಿವಿ ಮಟ್ಟದ ಯೋಗ ಪಂದ್ಯಾವಳಿ ಹಾಗೂ ವಿವಿ ತಂಡದ ಆಯ್ಕೆ ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದ ಅವರು, ಪತಂಜಲಿ ಮಹರ್ಷಿಗಳ ಯೋಗ ಸೂತ್ರದ ಆಧಾರದ ಮೇಲೆ, ವೈಜ್ಞಾನಿಕ ತಳಹದಿಯನ್ನು ಯೋಗ ಪದ್ಧತಿ ಹೊಂದಿದೆ ಎಂದರು.
ಯೋಗ ಈಗ ವಿಶ್ವ ಮನ್ನಣೆ ಪಡೆದಿದ್ದು ಯಾವುದೇ ಸಂಕುಚಿತ ಭಾವನೆಯಿಲ್ಲದೆ ಪ್ರತಿಯೊಬ್ಬರೂ ಉತ್ಸುಕತೆಯಿಂದ ಅನುಸರಿಸಬಹುದಾದ ಸಂಗತಿಯಾಗಿದೆ. ಹನುಮಂತ ಸಮುದ್ರೋಲ್ಲಂಘನೆ ಮಾಡಲು ಪ್ರಾಣಾಯಾಮ, ಯೋಗದಿಂದಲೇ ಶಕ್ತಿಯನ್ನು ಪಡೆದಿದ್ದು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಿ.ವಿ.ಕೆ.ಅಯ್ಯಂಗಾರ್ ಅವರಂಥ ಅನೇಕ ಯೋಗ ಸಾಧಕರನ್ನು ಕಾಣಬಹುದು. ಮನಸ್ಸು ಮತ್ತು ದೇಹದ ಮೇಲೆ ಆಗುವ ಅಡ್ಡ ಪರಿಣಾಮಗಳನ್ನು ದೂರ ಮಾಡಲು ಯೋಗಾಭ್ಯಾಸ ಅವಶ್ಯಕ. ವಿದ್ಯಾರ್ಥಿಗಳಿಗೆ ಯೋಗ ಬಹಳ ಮುಖ್ಯ. ಯೋಗ ಗುರುಗಳ ಮಾರ್ಗದರ್ಶನವಿಲ್ಲದೇ ಯೋಗಾಭ್ಯಾಸ ಮಾಡುವುದು ಸರಿಯಲ್ಲ ಎಂದರು.
ಕುವೆಂಪು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ, ಪ್ರಾಚಾರ್ಯ ಡಾ. ಆರ್.ಎಂ.ಜಗದೀಶ, ದೈಹಿಕ ಶಿಕ್ಷಣ ನಿರ್ದೇಶಕಿ ಬಿ.ಕೆ.ವಿದ್ಯಾಶ್ರೀ, ಐಕ್ಯುಎಸಿ ಸಂಯೋಜಕ ಡಾ. ಎ.ಪಿ.ಓಂಕಾರಪ್ಪ ಉಪಸ್ಥಿತರಿದ್ದರು. 23 ಕಾಲೇಜುಗಳಿಂದ ಸುಮಾರು 125 ಯೋಗ ಪಟುಗಳು ಭಾಗವಹಿಸಿದ್ದರು.