ಎನ್.ಆರ್.ಪುರ: ಆಯಸ್ಸು ವೃದ್ಧಿಸಿಕೊಳ್ಳಲು ಯೋಗ ಉತ್ತಮ ಮದ್ದು ಎಂದು ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಯೋಗ ಗುರು ಡಿ.ನಾಗರಾಜ್ ಗುರೂಜಿ ಹೇಳಿದರು.
15 ದಿನಗಳಿಂದ ನಡೆದ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಯೋಗ ಮಾಡುವುದರಿಂದ ರೋಗಗಳಿಂದ ಮುಕ್ತಿಪಡೆದುಕೊಳ್ಳಬಹುದು. ಯೋಗ ಮಾಡಿದರೆ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಬೆನ್ನು ನೋವು ನಿವಾರಣೆ ಆಗುವುದರೊಂದಿಗೆ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದರು.
ಪ್ರಾಣಾಯಾಮದಿಂದ ಆಯಸ್ಸು ಹೆಚ್ಚುತ್ತದೆ. ಲವಲವಿಕೆಯಿಂದ ಕೆಲಸ ಮಾಡಬಹುದು. ಯೋಗದ ಮಹತ್ವ ಅರಿತ 192 ರಾಷ್ಟ್ರಗಳಲ್ಲಿ ಜನರು ಯೋಗದ ಕಡೆ ಒಲವು ತೋರುತ್ತಿದ್ದಾರೆ. ಹಲವು ರೋಗಗಳಿಗೆ ಯಾವುದೇ ಔಷಧ ಪಡೆಯದೆ ಗುಣಪಡಿಸಿಕೊಳ್ಳಬಹುದು. ಪ್ರತಿ ನಿತ್ಯ ಅರ್ಧ ಗಂಟೆಯಾದರೂ ಯೋಗ ಮಾಡಬೇಕು. ಹಸಿರು ತರಕಾರಿ, ಮೊಳಕೆಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಹೇಳಿದರು.
ಯೋಗ ಶಿಬಿರಾರ್ಥಿ ಪ್ರೊ. ನಾಗೇಶ್ ಗೌಡ ಮಾತನಾಡಿ, ನಾವು ಶ್ರೇಷ್ಠ ಸಂಸ್ಕೃತಿ, ಪರಂಪರೆ ವಾರಸುದಾರರಾಗಿದ್ದೇವೆ. ಚರಕ, ಶುಶ್ರೂಷ ವೈದ್ಯಕೀಯ ಪದ್ಧತಿಯನ್ನು, ಪಂತಜಲಿ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದವರು. ಯೋಗದ ಮಹತ್ವ ಅರಿತ ವಿಶ್ವಸಂಸ್ಥೆ ಯೋಗ ದಿನ ಆಚರಿಸುತ್ತಿದೆ. ಯುವಜನಾಂಗಕ್ಕೆ ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಸರ್ಕಾರ ನೀಡಿದರೆ ಅದು ದೊಡ್ಡ ಕೊಡುಗೆಯಾಗಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ ಮಾತನಾಡಿ, ಆಧುನಿಕ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ಜೀವನದಲ್ಲಿ ಯಾರನ್ನೂ ಅವಲಂಭಿಸದ ರೀತಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಎನ್.ಕೆ.ಕಿರಣ್ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. ಹಾಗಾಗಿ ಶಿಕ್ಷಕರು ಯೋಗ ತರಬೇತಿ ಪಡೆದು ಮಕ್ಕಳಿಗೆ ಪ್ರತಿನಿತ್ಯ ಯೋಗ ಹೇಳಿಕೊಟ್ಟರೆ ಮಕ್ಕಳ ಏಕಾಗ್ರತೆ ಹೆಚ್ಚಿ ಕಲಿಕೆಗೆ ಪೂರಕವಾಗಲಿದೆ. ರೋಟರಿಯಿಂದ ಮಾ.24ರಂದು ಪುಷ್ಪ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯೋಗ ಗುರು ಡಿ.ನಾಗರಾಜ್ ಗುರೂಜಿ, ಹಿರಿಯ ನಾಗರಿಕ ಸಮಿತಿಯ ಚಕ್ರಪಾಣಿ, ಪ್ರತಿಮಾ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ದಿನೇಶ್, ರೋಟರಿ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಎನ್.ಎಲ್.ಮನೀಶ್, ಲಕ್ಷ್ಮಣ ಗೌಡ, ಕೆ.ಎಸ್.ಶಾಂತಕುಮಾರಿ, ಎಸ್.ಎಸ್.ಜಗದೀಶ್, ವಿಜಯಕುಮಾರ್, ಲಂಕೇಶ್, ಪ್ರಶಾಂತ್ ಎಲ್. ಶೆಟ್ಟಿ, ವಿದ್ಯಾ ನಂದಕುಮಾರ್, ಕೆ.ಎಸ್.ರಾಜಕುಮಾರ್, ಜಯಂತಿ ಇತರರಿದ್ದರು.