ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ವಿ.ಎಸ್.ಲೋಕೇಶ್ ಸೇರಿದಂತೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಸಾಮೂಹಿಕವಾಗಿ ಯೋಗಭ್ಯಾಸ ಮಾಡಿದರು. 
ನ್ಯೂಸ್

ಆರೋಗ್ಯಕರ ಜೀವನಶೈಲಿಗೆ ಯೋಗ ಮದ್ದು

ಮಳವಳ್ಳಿ: ವಿಶ್ವ ಯೋಗ ದಿನದ ಅಂಗವಾಗಿ ತಾಲೂಕು ಆಡಳಿತ ಹಾಗೂ ವಿವಿಧ ಯೋಗ ತರಬೇತಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶನಿವಾರ ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಿತಿಯ ನೂರಾರು ಸದಸ್ಯರು ಪಾಲ್ಗೊಂಡು ಯೋಗಾಭ್ಯಾಸ ನಡೆಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಹಸೀಲ್ದಾರ್ ಡಾ.ವಿ.ಎಸ್.ಲೋಕೇಶ್ ಮಾತನಾಡಿ, ಭಾರತದ ಅತ್ಯಂತ ಮಹತ್ವದ ಪುರಾತನ ಪರಂಪರೆ ಯೋಗ ಶಿಕ್ಷಣವಾಗಿದೆ. ಜನರ ಆರೋಗ್ಯಕರ ಜೀವನ ಶೈಲಿಗೆ ಯೋಗಾಭ್ಯಾಸ ಅತ್ಯಂತ ಪರಿಣಾಮಕಾರಿಯಾಗಿದೆ. ಮನುಕುಲದ ಚಟುವಟಿಯ ಬದುಕಿಗೆ ಸಹಕಾರಿಯಾಗಿರುವ ಯೋಗ ಶಿಕ್ಷಣವನ್ನು ಇಡೀ ವಿಶ್ವಕ್ಕೆ ಪಸರಿಸಬೇಕೆಂಬ ಉದ್ದೇಶದಿಂದ ವಿಶ್ವ ಯೋಗ ದಿನವನ್ನಾಗಿ ಘೋಷಣೆ ಮಾಡಲಾಗಿತ್ತು. ಇದನ್ನು 175 ದೇಶಗಳು ಪ್ರಸ್ತಾಪವನ್ನು ಬೆಂಬಲಿಸಿರುವುದು ಯೋಗದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಪ್ರತಿಯೊಬ್ಬರ ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗಭ್ಯಾಸ ಅತಿ ಮುಖ್ಯವಾಗಿದ್ದು, ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಯೋಗಾಭ್ಯಾಸ ವನ್ನು ಬೆಳಸಿಕೊಳ್ಳುವಂತೆ ಕರೆ ನೀಡಿದರು.

ಪಟ್ಟಣದಲ್ಲಿ ಯೋಗ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವ ಸರ್ಕಾರಕ್ಕೆ ಶಿಫಾರಸು ನೀಡುವ ಭರವಸೆ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ದಲ್ಲಿ ಸಮಿತಿಯ ಪ್ರಮುಖರಾದ ಎಂ.ಎನ್. ಮಹೇಶ್ ಕುಮಾರ್, ದೊಡ್ಡಣ್ಣ, ಶ್ರೀನಿಧಿ, ಲೀಲಾ, ಶಶಿಕಲಾ ಯೋಗ ಶಿಕ್ಷಕರಾದ ವೇಣುಗೋಪಾಲ್ ಸೇರಿದಂತೆ ನೂರಾರು ಯೋಗಾಸಕ್ತರು ಭಾಗವಹಿಸಿ ಯೋಗಭ್ಯಾಸ ಮಾಡಿದರು.