ನ್ಯೂಸ್

ಯೋಗ ಸಾರ್ವತ್ರಿಕವಾಗಿದ್ದು, ಯಾವುದೇ ಕಾಪಿರೈಟ್​ ಹೊಂದಿಲ್ಲ: ಪ್ರಧಾನಿ ಮೋದಿ

ಅಮೆರಿಕಾ:  ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಕಾಲ ಅಮೆರಿಕಾ ಪ್ರವಾಸ ಕೈಗೊಂಡಿದ್ದು, ವಿಶ್ವ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.

ಯೋಗ ದಿನಾಚರಣೆಯ ನೇತೃತ್ವವನ್ನು ಪ್ರಧಾನಿ ಮೋದಿ ವಹಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ 180 ದೇಶಗಳ ಗಣ್ಯರು ಭಾಗಿಯಾಗಿದ್ದಾರೆ.

ಯಾವುದೇ ಕಾಪಿರೈಟ್​​ ಇಲ್ಲ

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಿಮ್ಮೆಲ್ಲರನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ಎಲ್ಲಾ ದೇಶದ ಪ್ರತಿನಿಧಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಯೋಗ ಎಂದರೆ ಒಟ್ಟುಗೂಡಿಸುವುದು, ನೀವೆಲ್ಲರೂ ಒಟ್ಟಿಗೆ ಬಂದಿರುವುದು ಯೋಗದ ಇನ್ನೊಂದು ರೂಪದ ಅಭಿವ್ಯಕ್ತಿಯಾಗಿದೆ.

ಯೋಗ ಯಾವುದೋ ಒಂದು ದೇಶ, ಧರ್ಮ, ಜನಾಂಗಕ್ಕೆ ಸೇರಿದ್ದಲ್ಲ. ಯೋಗವು ಕಾಪಿರೈಟ್​ ಮತ್ತು ರಾಯಲ್ಟಿ ಪೇಮೆಂಟ್​ನಿಂದ ಮುಕ್ತವಾಗಿದೆ. ಇದು ಸಾರ್ವತ್ರಿಕವಾಗಿದ್ದು, ವಯಸ್ಸು, ಲಿಂಗ, ಫಿಟ್​ನೆಸ್​ ಲೆವೆಲ್​ಗೆ ಹೊಂದಿಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ಧಾರೆ.