ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ಸಾಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿನಿ ಭಾರ್ಗವಿಯನ್ನು ಮುಖ್ಯ ಶಿಕ್ಷಕಿ ಗೀತಾ ಪಿಂಟೋ ಸನ್ಮಾನಿಸಿದರು. ಅಂತೋನಿ ನಾರ್ಂಡಿಸ್, ಲಿಜಿಯಾ, ಸಿಸ್ಟರ್ ಟೆಲ್ಮಾ, ಲತಾ ಇತರರಿದ್ದರು.  
ನ್ಯೂಸ್

ದೈಹಿಕ ಸದೃಢತೆಗೆ ಯೋಗ ಪೂರಕ

ಸಾಗರ: ಮಕ್ಕಳು ಕಲಿಕೆ ಜತೆಗೆ ದೈಹಿಕ ಮತ್ತು ಮಾನಸಿಕ ದೃಢತೆ ಹೆಚ್ಚುವ ಕ್ರೀಡೆ, ಸಾಂಸ್ಕೃತಿಕ ಚಟುವಟಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಾಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಗೀತಾ ಪಿಂಟೋ ಹೇಳಿದರು.

ಸಾಗರದ ನಿರ್ಮಲ ಬಾಲಿಕಾ ಪ್ರೌಢಶಾಲೆಯಲ್ಲಿ ಮಂಗಳವಾರ ಯೋಗಾಸನಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಭಾರ್ಗವಿ ಎಸ್. ರಾಜ್‌ಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗಾಭ್ಯಾಸ ದೈಹಿಕ ಮತ್ತು ಮಾನಸಿಕ ದೃಢತೆಗೆ ಪೂರಕ. ವಿಶ್ವದಾದ್ಯಂತ ಜೂ.21ರಂದು ಯೋಗ ದಿನವನ್ನು ಆಚರಿಸುವ ಮೂಲಕ ಭಾರತೀಯ ಯೋಗಕ್ಕೆ ವಿಶ್ವಮಾನ್ಯತೆ ದೊರೆತಿದೆ. ನಮ್ಮ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಭಾರ್ಗವಿ ಜೂ.15ರಂದು ಕನ್ಯಾಕುಮಾರಿಯಲ್ಲಿ ನಡೆಯಲಿರುವ ಯೋಗ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲಿಯೂ ಯಶಸ್ಸು ಸಾಧಿಸಲಿ ಎಂದು ಆಶಿಸಿದರು.

ಭಾರ್ಗವಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕಾನುಗೋಡಿನ ಶ್ರೀಧರಮೂರ್ತಿ, ಸಂಧ್ಯಾ ಹೆಗಡೆ ಅವರ ಬಳಿ ಯೋಗಾಭ್ಯಾಸ ಮಾಡುತ್ತಿದ್ದೇನೆ. ಅವರು ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ. ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದರು.

ಶಿಕ್ಷಕರಾದ ಅಂತೋನಿ ನಾರ್ಂಡಿಸ್, ಲಿಜಿಯಾ, ಸಿಸ್ಟರ್ ಟೆಲ್ಮಾ, ಸಿಸ್ಟರ್ ಕ್ಲೆಮೆನ್ಸಿ, ಲತಾ, ಪರ್ವೀಜಾ ಬೇಗಂ ಇತರರಿದ್ದರು.