ನ್ಯೂಸ್

ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ವರದಾನ

ಪಿರಿಯಾಪಟ್ಟಣ: ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗಭ್ಯಾಸವು ಒಂದು ಉತ್ತಮ ವರದಾನವಾಗಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್‌ನ ನಿಯೋಜಿತ ಅಧ್ಯಕ್ಷ ಹಾಗೂ ವಕೀಲ ಜೆ.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಅಂಜನಾದ್ರಿ ಯೋಗ ಗ್ರೂಪ್, ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಹಯೋಗದಲ್ಲಿ ಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಲ್ಲಿ ಎಷ್ಟೇ ಸಂಪತ್ತು ಇದ್ದರೂ ಉತ್ತಮ ಆರೋಗ್ಯ ಹೊಂದಿರದಿದ್ದಲ್ಲಿ ಯಾವುದೂ ಪ್ರಯೋಜನಕ್ಕೆ ಬಾರದು. ವಿಶ್ವದಲ್ಲಿ ಹೆಚ್ಚು ಬೆಲೆಬಾಳುವ ವಸ್ತುವೆಂದರೆ ಅದು ಆರೋಗ್ಯವಾಗಿದೆ ಎಂದರು.

ಪ್ರತಿನಿತ್ಯ ಯೋಗ ಸೇರಿದಂತೆ ಉತ್ತಮ ದೈಹಿಕ ಚಟುವಟಿಕೆಗಳನ್ನು ನಡೆಸಿದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಆರೋಗ್ಯದ ಸಮಸ್ಯೆ ಕಂಡು ಬರುತ್ತಿದ್ದು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಈಡಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಉತ್ತಮ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಿದೆ ಎಂದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಹೆಮ್ಮೆ ನಮ್ಮ ಭಾರತದ್ದಾಗಿದೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜೂನ್ 21ನೇ ತಾರೀಕನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರಿಗೆ ಸಂದ ಗೌರವವಾಗಿದೆ. ಪ್ರತಿನಿತ್ಯ ಯೋಗಭ್ಯಾಸವನ್ನು ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್‌ನ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ಯೋಗಭ್ಯಾಸವು ವಿಶ್ವ ಯೋಗ ದಿನದಂದು ಮಾತ್ರ ಸೀಮಿತಗೊಳ್ಳದೆ ಪ್ರತಿನಿತ್ಯವೂ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಕೆಂಪರಾಜು, ದಾಸ್ ಹಾಗೂ ಪತ್ರಕರ್ತ ನವೀನ್‌ಕುಮಾರ್ ಶಿಬಿರಾರ್ಥಿಗಳಿಗೆ ಯೋಗ ಹೇಳಿಕೊಟ್ಟರು. ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹಿರಿಯ ಮಹಿಳಾ ಯೋಗ ಪಟು ಶೋಭಾ ಕುಡುವ, ಪುರಸಭೆ ಸದಸ್ಯ ಎಚ್.ಕೆ.ಮಂಜುನಾಥ್, ಮುರಾರ್ಜಿ ವಸತಿ ಶಾಲೆಯ ಶಿಕ್ಷಕ ಪುಟ್ಟಮಾದಯ್ಯ, ರಾಜೇಶ್, ಮುಖಂಡರಾದ ನಳಿನಿ, ಕೆ.ಆರ್.ಕೆಂಪಣ್ಣ, ಬಿರ್ಲಾ ಹರೀಶ್ ಇತರರು ಇದ್ದರು.

21.ಥಿಠಿ.02: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಿರಿಯಾಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಯೋಗಭ್ಯಾಸದಲ್ಲಿ ತೊಡಗಿರುವುದು.