ನ್ಯೂಸ್

ಯೋಗಾಸನ-ಶರೀರ ಮತ್ತು ಮನಸ್ಸಿನ ಅನ್ವೇಷಣೆಯ ಮಾರ್ಗ

 ಸಾಮಾನ್ಯವಾಗಿ ನೀವು ಯಾವುದನ್ನು ಬೇಡ ಎಂದು ನಿಲ್ಲಿಸಲು ಪ್ರಯತ್ನ ಪಡುತ್ತೀರೋ, ಅದೇ ನಡೆಯುತ್ತದೆ. ನೀವೂ ಸೇರಿದಂತೆ ಒಟ್ಟಾರೆ ಎಲ್ಲರ ಮನಸ್ಸಿನ ಸ್ವಭಾವವೇ ಅಂತಹದು. ಆದರೆ ಯೋಗದ ಸಂಪೂರ್ಣ ಪದ್ಧತಿಯು, ನಿಮ್ಮ ಶರೀರ ಮತ್ತು ಮನಸ್ಸಿನ ಸ್ವರೂಪವನ್ನು ಅನುಭವದ ಮೂಲಕ ಅನ್ವೇಷಿಸುವುದರ ಕುರಿತಾಗಿದೆ. ನೀವು ಬೆಳಗ್ಗೆ ಎದ್ದು, ಆಸನಗಳನ್ನು ಮಾಡುವುದು - ಈ ಪ್ರಪಂಚದ ಬಹುತೇಕ ಮೂರ್ಖರು ಹೇಳುವ ಹಾಗೆ - ಅಂಗಾಂಗಗಳನ್ನು ಚಾಚುವ ಕಸರತ್ತಿಗಾಗಿ ಅಲ್ಲ. ಹೌದು ಚಾಚಬೇಕಾಗುತ್ತದೆ, ಆದರೆ ಮೂಲಭೂತವಾಗಿ ಅದು ನಿಮ್ಮ ಶರೀರ ಮತ್ತು ಮನಸ್ಸನ್ನು ಅನ್ವೇಷಿಸುವ ಪರಿ. ನಿಮ್ಮ ಜೀವನದ ಅತಿ ದೊಡ್ಡ ಸಮಸ್ಯೆ ಏನೆಂದರೆ, ಇಲ್ಲಿ ನೀವು ಎರಡು ಮೂಲ ವಾಹನಗಳ ಮೇಲೆ ಏನೂ ಹಿಡಿತವಿಲ್ಲದೆ ಜೀವಿಸುತ್ತಿದ್ದೀರಿ - ಭೌತಿಕ ಶರೀರ ಮತ್ತು ಮನಸ್ಸು - ಇವೆರಡರ ಮೇಲೆ ಹಿಡಿತವಿಲ್ಲದಿದ್ದರೆ ಜೀವನದಲ್ಲಿ ಸಾಗುವುದು ಸಾಧ್ಯವೇ ಇಲ್ಲ.

ನೀವು ಜೀವನದಲ್ಲಿ ಎಷ್ಟು ಸರಾಗವಾಗಿ ಪ್ರಯಾಣಿಸುತ್ತಿದ್ದೀರಿ ಎನ್ನುವುದು ನೀವು ನಿಮ್ಮ ಶರೀರ ಮತ್ತು ನಿಮ್ಮ ಮನಸ್ಸನ್ನು ಎಷ್ಟು ಆಳವಾಗಿ ಅರಿತು ಹಿಡಿತದಲ್ಲಿಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿದೆ. ಪ್ರಯಾಣ ಸರಾಗವಾಗಿರಬೇಕಾದರೆ, ವಾಹನ ಚೆನ್ನಾಗಿರಬೇಕು, ನೀವು ವಾಹನವನ್ನು ಅರ್ಥ ಮಾಡಿಕೊಂಡಿರಬೇಕು - ಅದು ಹೇಗೆ ವರ್ತಿಸುತ್ತದೆ, ಏನು ಮಾಡುತ್ತದೆ ಮತ್ತು ಏಕೆ ಹಾಗೆ ಮಾಡುತ್ತಿದೆ ಎಂದು. ಇದು ಜ್ಞಾನೋದಯ ಅಲ್ಲ - ನೀವು ಸುಮ್ಮನೇ ಮೌಢ್ಯದೊಂದಿಗೆ ಬದುಕಬೇಕೆಂದಿದ್ದರೂ ಸಹ ಇದು ಅವಶ್ಯಕ. ಮೌಢ್ಯವೇ ಪರಮಾನಂದ (ಇಗ್ನೋರೆನ್ಸ್ ಈಸ್ ಬ್ಲಿಸ್) ಎಂಬ ಹೇಳಿಕೆಯೇನಾದರೂ ನಿಜವಾಗಿದ್ದರೆ, ಇಷ್ಟೊತ್ತಿಗೆ ಪ್ರಪಂಚವೆಲ್ಲ ಪರಮಾನಂದದಲ್ಲಿ ಮುಳುಗಿರುತ್ತಿತ್ತು.

ಪರಮಾನಂದ ಸಿಗುತ್ತದೆ ಎಂದು ನೀವಾಗಿಯೇ ಮೌಢ್ಯವನ್ನು ಆರಿಸಿಕೊಂಡಿದ್ದರೂ, ಈ ಪ್ರಪಂಚದಲ್ಲಿ ವ್ಯವಹರಿಸಲು ನೀವು ಈ ಶರೀರ ಮತ್ತು ಮನಸ್ಸಿನ ಮೇಲೆ ಹಿಡಿತ ಹೊಂದಿರಲೇಬೇಕು. ಇಲ್ಲದಿದ್ದರೆ ಏನು ಮಾಡುವುದಕ್ಕೂ ಸಮಸ್ಯೆಯಿರುತ್ತದೆ. ಇದರ ಬಗ್ಗೆ ನಾನು ಬೌದ್ಧಿಕ ವಿವರಣೆ ನೀಡಲು ಹೋಗುವುದಿಲ್ಲ, ಏಕೆಂದರೆ ಆಗ ನೀವು ತಲ್ಲಣಗೊಳ್ಳುತ್ತೀರಿ. ಇದಕ್ಕಾಗಿಯೇ ಯೋಗ ಪದ್ಧತಿ ಬೌದ್ಧಿಕವಾಗಿ ಸಮೀಪಿಸಲು ಪ್ರಯತ್ನಿಸದೇ ಅನುಭವದ ಮೂಲಕ ಅನ್ವೇಷಣೆಗೆ ಹೋಗುವುದು.

ಶರೀರ, ಮನಸ್ಸಿನ ಒಂದು ಅನ್ವೇಷಣೆ: ನೀವು ಆಸನಗಳನ್ನು ಮಾಡುವಾಗ, ನಿಮ್ಮ ಶರೀರ ಮತ್ತು ಮನಸ್ಸಿನ ಮೂಲ ಸ್ವಭಾವವನ್ನು ಅನ್ವೇಷಿಸುತ್ತೀರಿ. ನಿಮ್ಮ ಬೆರಳುಗಳನ್ನು ಒಂದು ರೀತಿಯಲ್ಲಿ ಚಲಿಸಿದರೆ ನಿಮ್ಮ ಮನಸ್ಸು ಅದರಂತೆಯೇ ಕೆಲಸ ಮಾಡುತ್ತದೆ. ನೀವು ಶರೀರದಿಂದ ಮಾಡುವ ಪ್ರತಿಯೊಂದು ಚಟುವಟಿಕೆಯೂ, ನಿಮ್ಮ ಮನಸ್ಸಿನೊಡನೆಯೂ ಏನೋ ಒಂದನ್ನು ಮಾಡುತ್ತದೆ. ಇದನ್ನು ನೀವು ಪುಸ್ತಕ ಓದಿ ತಿಳಿಯಲು ಆಗುವುದಿಲ್ಲ. ಅನ್ವೇಷಿಸಿದರೆ ಮಾತ್ರ ತಿಳಿಯಬಹುದು. ಕಣ್ಣು ಮುಚ್ಚಿ ಏನೋ ಒಂದನ್ನು ಮನಸ್ಸಿನಿಂದ ಬಲವಂತವಾಗಿ ಕಿತ್ತೊಗೆಯಲು ಪ್ರಯತ್ನಿಸಿದರೆ, ನೀವು ಯಾವತ್ತೂ ಯಶಸ್ವಿ ಆಗುವುದಿಲ್ಲ.

ಇದು ಎಲ್ಲರಲ್ಲಿಯೂ ಮೂಡಬೇಕಾದ ಅತ್ಯಂತ ಮೂಲಭೂತವಾದ ಮತ್ತು ಅತ್ಯಂತ ಮುಖ್ಯವಾದ ಅರಿವು. ಈ ಅರಿವು ಇಲ್ಲದೇ ಹೋದರೆ, ನಿಮ್ಮನ್ನು ನೀವೇ ಅಸ್ತವ್ಯಸ್ತತೆಗೆ ಗುರಿ ಮಾಡಿಕೊಳ್ಳುತ್ತೀರಿ. ನಿಮ್ಮ ಬುದ್ಧಿ ಅಷ್ಟು ಹರಿತವಾಗಿಲ್ಲದಿದ್ದರೆ ಪರವಾಗಿಲ್ಲ. ಆದರೆ, ಹರಿತವಾಗಿದ್ದರೆ ನಿಮ್ಮನ್ನು ನೀವೇ ಎಲ್ಲಾ ಕಡೆ ಕುಯ್ದುಕೊಳ್ಳುತ್ತೀರಿ. ಯಾರಾದರೂ ನಿಮ್ಮನ್ನು ಕಾಪಾಡುವಷ್ಟರಲ್ಲಿ ನೀವು ತುಂಡುತುಂಡಾಗಿರುತ್ತೀರಿ. ಪ್ರತಿದಿನ ಅಂತಹ ತುಂಡುತುಂಡಾದ ವ್ಯಕ್ತಿಗಳು ನನ್ನ ಬಳಿ ಬಂದು ‘ಸದ್ಗುರು, ನನಗೆ ಜ್ಞಾನೋದಯ ಹೊಂದುವಲ್ಲಿ ಆಸಕ್ತಿ ಇದೆ’ ಎಂದು ಹೇಳುತ್ತಾರೆ. ಮೊದಲು ಗಾಯಗಳನ್ನು ಗುಣಪಡಿಸಿಕೊಳ್ಳಿ, ಕನಿಷ್ಠ ಪಕ್ಷ ಹೊಸ ಗಾಯ ಮಾಡಿಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ನಿಮ್ಮ ಹತ್ತಿರ ಬಹಳ ಹರಿತವಾದ ಚಾಕು ಇದೆ.

ಶೇವ್ ಮಾಡಿಕೊಳ್ಳುವಾಗ ಸಹ ಅನೇಕ ಗಂಡಸರು ತಮ್ಮ ಮುಖಗಳನ್ನು ಕುಯ್ದುಕೊಳ್ಳುತ್ತಾರೆ. ತುಂಬಾ ಹತ್ತಿರದಿಂದ ಶೇವ್ ಮಾಡಿಕೊಳ್ಳಲು ಪ್ರಯತ್ನಿಸಿ, ಅಗತ್ಯಕ್ಕಿಂತ ಹೆಚ್ಚು ಹತ್ತಿರ ಹೋಗಿದ್ದಕ್ಕೆ, ಮುಖದಲ್ಲಿ ರಕ್ತ ಹರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಮೂಲ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು, ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವುದು, ಇವು ಬೌದ್ಧಿಕ ವಿಶ್ಲೇಷಣೆಯಿಂದ ಬರುವುದಿಲ್ಲ- ಇದು ಅನ್ವೇಷಣೆ. ನೀವೇನು ಮಾಡಬೇಕು ಎಂದರೆ- ನಿಮ್ಮ ಶರೀರವನ್ನು ಒಂದು ಭಂಗಿಯಲ್ಲಿ ಹಿಡಿದಿಟ್ಟುಕೊಳ್ಳಿ, ನಿಮ್ಮ ಮನಸ್ಸು ವರ್ತಿಸುವ ರೀತಿಯನ್ನು ಗಮನಿಸಿ. ಭಂಗಿಯನ್ನು ಬದಲಾಯಿಸಿ, ನಿಮ್ಮ ಮನಸ್ಸು ಬೇರೆ ರೀತಿ ವರ್ತಿಸುವುದನ್ನು ಗಮನಿಸಿ.

ಒಂದು ಭಂಗಿಯಲ್ಲೇ ಇದ್ದು ಸರಿಯಾಗಿ ಉಸಿರಾಡಿದರೆ, ನೀವು ಈ ಪ್ರಕ್ರಿಯೆಗೆ ಒಳಗಾಗಿದ್ದಾಗ ಮನಸ್ಸು ಹಲವಾರು ಸ್ಥಿತಿಗಳಿಗೆ ಹೋಗುತ್ತದೆ. ಈ ಅನ್ವೇಷಣೆಯೇ ಯೋಗದ ಮೂಲಭೂತವಾದ ಅಂಶ. ಹಠ ಯೋಗ ಎನ್ನುವುದು ಗುರಿಯಲ್ಲ- ಅದೊಂದು ಪೂರ್ವಸಿದ್ಧತೆ. ಆ ಪೂರ್ವಸಿದ್ಧತೆ ಇಲ್ಲದೆ ಗುರಿ ಮುಟ್ಟಲು ಪ್ರಯತ್ನಿಸಿದರೆ, ನೀವು ಬಹುಶಃ ಕುಸಿದುಹೋಗಬಹುದು. ಸುಮಾರು ಶೇ. 80ರಷ್ಟು ವ್ಯಕ್ತಿಗಳು ಯಾವುದಾದರೂ ಬಗೆಯ ಭೌತಿಕ ಪೂರ್ವಸಿದ್ಧತೆ ಇಲ್ಲದೆ, ತಮ್ಮ ಜೀವನದಲ್ಲಿ ಯಾವ ರೀತಿಯ ಧ್ಯಾನವನ್ನು ಮಾಡಲೂ ಸಾಧ್ಯವಿಲ್ಲ. ಅವರು ಕುಳಿತುಕೊಳ್ಳುವ ರೀತಿ, ಶರೀರವನ್ನು ಚಲಿಸುವ ರೀತಿಯಿಂದಲೇ ಅವರು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ ಧ್ಯಾನವನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗುತ್ತದೆ. ಸ್ವಲ್ಪ ಭೌತಿಕ ಪೂರ್ವಸಿದ್ಧತೆ ಬೇಕಾಗುತ್ತದೆ, ಏಕೆಂದರೆ ಶರೀರ ಮತ್ತು ಮನಸ್ಸು ಎರಡು ಬೇರೆ ಬೇರೆ ವಸ್ತುಗಳಲ್ಲ - ಅಥವಾ ನಿಮ್ಮ ಮೆದುಳೇನಾದರೂ ನಿಮ್ಮ ಶರೀರದ ಹೊರಗೆ ಇದೆಯೇ?

ನಿಮ್ಮ ಕಿರುಬೆರಳಿಗೆ ಏನು ಆಗುತ್ತದೆಯೋ, ಅದು ನಿಮ್ಮ ಮೆದುಳಿಗೂ ಆಗುತ್ತದೆ. ನಿಮ್ಮ ಮೆದುಳಿಗೆ ಆಗುವುದು ಕಿರುಬೆರಳಿಗೆ ಆಗುತ್ತದೆ. ಮೆದುಳು ತಾನೇ ಒಂದು ಪ್ರತ್ಯೇಕವಾದ ಭಾಗವೇನಲ್ಲ. ವೈದ್ಯರು ಹೆಣಗಳನ್ನು ಕೊಯ್ದು ನೋಡಿ ಶರೀರದ ಬಗ್ಗೆ ತಿಳಿದುಕೊಂಡಿದ್ದಾರೆ- ನೀವು ಹೆಣವನ್ನು ಕೊಯ್ದು, ಅಂಗಾಂಗಗಳನ್ನು ತೆಗೆದು ಬೇರೆ ಬೇರೆಯಾಗಿ ಇಟ್ಟರೆ, ಅವು ಎಲ್ಲಾ ಪ್ರತ್ಯೇಕವಾಗುತ್ತವೆ. ಆದರೆ ಜೀವಂತ ಶರೀರ ಹಾಗೆ ಇಲ್ಲ - ಅದು ಒಂದು. ಕೇವಲ ಬೇರ್ಪಡಿಸುವ ಗುಣ ಹೊಂದಿರುವ ಚೂರಿಗೆ ಅದು ಪ್ರತ್ಯೇಕ, ಆದರೆ ಜೀವಂತವಾಗಿರುವ ಮನುಷ್ಯರಿಗೆ ಅದು ಎಲ್ಲಾ ಒಂದು. ಹಾಗಾಗಿಯೇ ಶರೀರ ಇರುವ ರೀತಿಯಲ್ಲೇ ಯೋಗ ಪದ್ಧತಿಯೂ ವಿನ್ಯಾಸಗೊಂಡಿದೆ.

ಪ್ರಾಯೋಗಿಕವಾಗಿ, ನಿಮಗೆ ಬೇಕಾಗಿರುವುದನ್ನು ತಡೆಗಟ್ಟಲು ಪ್ರಯತ್ನಿಸಿ. ಅದು ನಿಮ್ಮೊಳಗೆ ಇನ್ನಷ್ಟು ಬಲವಾಗಿ ವ್ಯಕ್ತವಾಗುವುದನ್ನು ಕಾಣುತ್ತೀರಿ. ನಿಮಗೆ ಏನಾದರೂ ಆಗಬೇಕಿದ್ದರೆ, ಅದು ಆಗದಂತೆ ಮಾಡಲು ಪ್ರಯತ್ನಿಸಿ. ಅದು ಆಗೇ ಆಗುತ್ತದೆ. ಏಕೆ ಹೀಗೆ ಆಗುತ್ತಿದೆ ಎಂದರೆ ಈಗ ನೀವು ಇರುವ ಸ್ಥಿತಿ, ನೀವು ಮನಸ್ಸನ್ನು ಮೊದಲನೇ ಗೇರ್​ಗೆ ಹಾಕಲು ಹೋದಾಗ, ಅದು ರಿವರ್ಸ್ ಗೇರ್​ಗೆ ಹೋಗುತ್ತದೆ. ಕೆಲಸ ಮಾಡಲು ಇದು ಉತ್ತಮ ವಿಧಾನವೇನೂ ಅಲ್ಲ, ಆದರೆ ಸದ್ಯದಲ್ಲಿ ಇದು ಹೀಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನಿ ಸಬಹುದು- ನೀವು ಯಾವುದನ್ನು ತಡೆಗಟ್ಟಲು ಹೋಗುತ್ತೀರೋ, ಅದು ಆಗೇ ಆಗುತ್ತದೆ.

ಯೋಗಸಾಧನೆ ಕೆಲಸ ಮಾಡುವ ರೀತಿ: ನಾಳೆಯಿಂದ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದೇಳಿ, ತಣ್ಣೀರಿನಲ್ಲಿ ಸ್ನಾನ ಮಾಡಿ ಮತ್ತು 5.30ಕ್ಕೆ ನಿಮ್ಮ ಸಾಧನೆಯನ್ನು ಆರಂಭಿಸಿ. ಮನಸ್ಸಿನಲ್ಲಿ ಮುಂಚೆ ಸಮಸ್ಯೆಯಾಗಿದ್ದ ಎಷ್ಟೋ ವಿಷಯಗಳು ಸ್ವಲ್ಪ ಕಾಲದ ನಂತರ ಹೊರಟು ಹೋಗಿರುತ್ತವೆ. ನಿಮ್ಮ ಹಠ ಯೋಗವನ್ನು ದಿನಕ್ಕೆ ಒಂದು ಗಂಟೆ ಮಾಡಿ- ಅದು ಕೆಲಸ ಮಾಡುತ್ತದೆ. ಆದರೆ ಅದು ಹೇಗೆ ಕೆಲಸ ಮಾಡುತ್ತದೆ, ಅದರ ಕಾರ್ಯವೈಖರಿ ಮತ್ತು ಪ್ರಕ್ರಿಯೆಗಳು ಏನು ಎಂದು ತಿಳಿಯಬೇಕು ಎಂದಿದ್ದರೆ, ಅದಕ್ಕೆ ಬಹಳಷ್ಟು ಪರಿಶ್ರಮ ಮತ್ತು ಸಮಯ ಬೇಕು. ಅದು ಕೆಲಸ ಮಾಡುವ ಹಾಗೆ ಮಾಡುವುದಕ್ಕೆ ಅಷ್ಟೇನೂ ಬೇಕಾಗುವುದಿಲ್ಲ. ಆದರೆ ಅದು ಹೇಗೆ ಕೆಲಸ ಮಾಡುತ್ತದೆ, ಯಾಕೆ ಆ ರೀತಿ ಮಾಡುತ್ತದೆ, ಯಾಕೆ ಒಂದು ನಿರ್ದಿಷ್ಟ ಆಸನ ಒಂದು ನಿರ್ದಿಷ್ಟ ಪರಿಣಾಮ ಉಂಟುಮಾಡುತ್ತದೆ... ಹೀಗೆಲ್ಲಾ ಅದರ ಸಂಪೂರ್ಣ ಸಂಕೀರ್ಣತೆಯನ್ನು ತಿಳಿದುಕೊಳ್ಳಬೇಕಾಗಿದ್ದರೆ, ಅದಕ್ಕೆ ಅನೇಕ ಜನ್ಮಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ.

ತಂತ್ರಜ್ಞಾನದ ಲಾಭ ಪಡೆಯಲು ಬಯಸುವವರು ಅದನ್ನು ಉಪಯೋಗಿಸಲು ಕಲಿಯಬೇಕು ಅಷ್ಟೇ. ತಂತ್ರಜ್ಞಾನದ ಹಿಂದಿರುವ ಆಧಾರ ಮತ್ತು ವಿಜ್ಞಾನವನ್ನು ತಿಳಿಯಲು ಬಯಸುವವರಿಗೆ ಅದು ದೀರ್ಘಾವಧಿಯ ಕೆಲಸ. ಇದೆಲ್ಲ ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯಲು ನನಗೆ ಮೂರು ಜನ್ಮಗಳು ಬೇಕಾಯಿತು. ನೀವು ನನಗಿಂತಲೂ ಜಾಣರು ಎಂದು ನಾನು ಊಹಿಸುತ್ತೇನೆ, ಏಕೆಂದರೆ ನೀವು ನನ್ನ ಹತ್ತಿರ ಬಂದಿದ್ದೀರಿ, ಅದೂ ನಾನು ಏನೂ ಸಿಹಿಯಾದುದನ್ನು ಕೊಡದೆ, ಸ್ವರ್ಗವನ್ನು ಪ್ರಾಮಿಸ್ ಮಾಡದೆ, ಅಪ್ಪುಗೆ ನೀಡದೆ, ಕೊನೆಗೆ ಒಂದು ಮಧುರವಾದ ನುಡಿ ಕೂಡ ಆಡದೆ - ಏನೆಲ್ಲಾ ಮಾಡಿದ ಮೇಲೂ ನೀವು ಇಲ್ಲೇ ಇದ್ದೀರಿ. ನೀವು ಜಾಣರಾಗಿದ್ದಲ್ಲಿ, ಅದು ಒಂದು ಜೀವನಪರ್ಯಂತದ ಕೆಲಸ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)